ಇಂಪಾಲ್: ಕಳೆದ 2 ವರ್ಷಗಳಿಂದ ಜನಾಂಗೀಯ ಹಿಂಸಾಚಾರದಿಂದ ಬಿಕ್ಕಟ್ಟು ಎದುರಿಸುತ್ತಿರುವ ಮಣಿಪುರ ರಾಜ್ಯದ ಸಿಎಂ ಬಿರೇನ್ ಸಿಂಗ್ ದಿಢೀರ್ ರಾಜೀನಾಮೆ ನೀಡಿರುವುದು ಮತ್ತಷ್ಟು ಸಂಕಷ್ಟ ತಂದಿದೆ. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆಯಾಗುತ್ತಾ ಎಂಬ ಪ್ರಶ್ನೆ ಉದ್ಭವಿಸಿದೆ.
ರಾಜ್ಯದ ವಿಧಾನಸಭಾ ಅಧಿವೇಶನದ ಹೊತ್ತಲ್ಲೇ ಸಿಂಗ್ ರಾಜೀನಾಮೆ ನೀಡಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಶನಿವಾರ ಬಿರೇನ್ ಸಿಂಗ್ ಭೇಟಿಯಾಗಿದ್ದರು. 2 ಗಂಟೆಗಳ ಕಾಲ ನಡೆದ ಸಭೆಯ ನಂತರ ಅವರಿಗೆ ರಾಜೀನಾಮೆ ನೀಡುವಂತೆ ಹೇಳಲಾಯಿತು ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಭಾನುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಇಂಪಾಲ್‌ಗೆ ವಿಮಾನದಲ್ಲಿ ಹಿಂತಿರುಗಿದ ಸಿಂಗ್, ಹೊಸದಾಗಿ ನೇಮಕಗೊಂಡ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ಹೊತ್ತಲ್ಲಿ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆ ಸಾಧ್ಯತೆ ಕುರಿತು ಪ್ರಶ್ನೆ ಉದ್ಭವಿಸಿದೆ. ರಾಜ್ಯಪಾಲರು ಈಗ ಕೇಂದ್ರದೊಂದಿಗೆ ಸಮಾಲೋಚಿಸಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕೇ ಅಥವಾ ಬೇರೆ ಹೆಸರನ್ನು ಶಿಫಾರಸು ಮಾಡಬೇಕೇ ಎಂಬುದನ್ನು ಪರಿಶೀಲಿಸಲಿದ್ದಾರೆ.
ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ. ರಾಷ್ಟ್ರಪತಿ ಆಳ್ವಿಕೆ ಹೇರಲು, ರಾಜ್ಯಪಾಲರು ಪ್ರಸ್ತುತ ಸರ್ಕಾರವು ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳುವ ವರದಿಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಬೇಕು. ನಂತರ ಅಧಿಸೂಚನೆ ಹೊರಡಿಸಲಾಗುತ್ತದೆ.
ಮಣಿಪುರ ವಿಧಾನಸಭೆಯಲ್ಲಿ ಬಿಜೆಪಿ ಇನ್ನೂ ಸಂಖ್ಯಾಬಲವನ್ನು ಹೊಂದಿದೆ. ಆದರೆ, ಸಿಂಗ್ ಅವರ ಪಕ್ಷದ ಹೆಚ್ಚಿನ ಸದಸ್ಯರ ವಿಶ್ವಾಸವನ್ನು ಹೊಂದಿಲ್ಲ.
ಮಣಿಪುರ ಕಾಂಗ್ರೆಸ್ ಅಧ್ಯಕ್ಷ ಕೀಶಮ್ ಮೇಘಚಂದ್ರ ಶುಕ್ರವಾರ, ರಾಜ್ಯ ವಿಧಾನಸಭೆಯಲ್ಲಿ ಎನ್. ಬಿರೇನ್ ಸಿಂಗ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ಹೇಳಿದ್ದರು.
60 ಸದಸ್ಯ ಬಲದ ಮಣಿಪುರ ವಿಧಾನಸಭೆಯಲ್ಲಿ ಕಾಂಗ್ರೆಸ್ ಐದು ಶಾಸಕರನ್ನು ಹೊಂದಿದೆ. ಮತ್ತೊಂದು ವಿರೋಧ ಪಕ್ಷವಾದ ನ್ಯಾಷನಲ್ ಪೀಪಲ್ಸ್ ಪಾರ್ಟಿ ಏಳು ಶಾಸಕರನ್ನು ಹೊಂದಿದೆ. ಬಿಜೆಪಿ 32 ಶಾಸಕರನ್ನು ಹೊಂದಿದ್ದು, ನಾಗಾ ಪೀಪಲ್ಸ್ ಫ್ರಂಟ್‌ನ ಐದು ಶಾಸಕರು ಮತ್ತು ಜನತಾದಳ (ಯುನೈಟೆಡ್) ನ ಆರು ಶಾಸಕರ ಬೆಂಬಲವನ್ನು ಹೊಂದಿದೆ. ಮೂವರು ಸ್ವತಂತ್ರ ಶಾಸಕರು ಮತ್ತು ಕುಕಿ ಪೀಪಲ್ಸ್ ಅಲೈಯನ್ಸ್‌ನ ಇಬ್ಬರು ಶಾಸಕರು ಇದ್ದಾರೆ.