ಉಡುಪಿ: ಭಾರತ ಸೇರಿದಂತೆ ಸುಮಾರು 21 ದೇಶಗಳ ನೋಟಿನ ಯಥಾಪ್ರತಿಯನ್ನು ಬಳಸಿಕೊಂಡು ಉಡುಪಿಯಲ್ಲಿ ಗಣೇಶಮೂರ್ತಿಯನ್ನು ನಿರ್ಮಾಣ ಮಾಡಲಾಗಿದೆ.
ಇಲ್ಲಿನ ಸ್ಯಾಂಡ್ ಆರ್ಟ್ ಕಲಾವಿದರು ರಚಿಸಿದ ನೋಟ್ ಗಣಪ ಎಲ್ಲರ ಆಕರ್ಷಣೆಗೆ ಪಾತ್ರನಾಗಿದ್ದಾನೆ. ಭಾರತವೂ ಸೇರಿದಂತೆ ಸುಮಾರು 21 ದೇಶಗಳ ನೋಟಿನ ಯಥಾಪ್ರತಿಯನ್ನು ಬಳಸಿಕೊಂಡು ಈ ಸುಂದರ ಗಣೇಶ ರೂಪು ತಳೆದಿದ್ದಾನೆ. ಭಾರತದ ನೋಟುಗಳನ್ನು ಹೆಚ್ಚಾಗಿ ಬಳಸಿದ್ದು, ಶ್ರೀಲಂಕಾ, ಬಾಂಗ್ಲಾ, ಅಫ್ಘಾನಿಸ್ತಾನ್, ಬೂತಾನ್, ಯುಎಇ, ಅಮೆರಿಕ, ಇಸ್ರೇಲ್ ರಾಷ್ಟ್ರಗಳ ನೋಟಿನ ಪ್ರತಿಗಳನ್ನು ಇಲ್ಲಿ ಕಾಣಬಹುದು.
ಸುಮಾರು 12 ಅಡಿ ಎತ್ತರದ ಈ ಗಣೇಶ ನಗರದ ಸಾಯಿರಾಧಾ ಮೋಟಾರ್ಸ್‍ನಲ್ಲಿ ದರ್ಶನ ನೀಡಿದ್ದಾನೆ. ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಮತ್ತು ಪಂಚರತ್ನ ಸೇವಾ ಟ್ರಸ್ಟ್ ಇವರ ಜಂಟಿ ಆಯೋಜನೆಯಲ್ಲಿ, ಗಣೇಶೋತ್ಸವದ ಪ್ರಯುಕ್ತ ವಿಶಿಷ್ಟ ಗಣೇಶನನ್ನು ಕೂರಿಸಲಾಗಿದೆ. ಮಂಡ್ಯದಿಂದ ತರಿಸಲಾದ ಬೆಲ್ಲದಿಂದ ನಿರ್ಮಾಣವಾದ ಪರಿಸರ ಸ್ನೇಹಿ “ಬೆಲ್ಲದ ಗಣಪತಿ”ಯ ಪ್ರದರ್ಶನವನ್ನು ಚಿತ್ತರಂಜನ್ ಸರ್ಕಲ್ ನ ಪ್ರದರ್ಶನ ಮಂಟಪದಲ್ಲಿ ಏರ್ಪಡಿಸಿದೆ.
ಗಣಪತಿ ತಯಾರಿಕೆಗೆಂದು ಮಂಡ್ಯದಿಂದ 240 ಕೆಜಿ ತೂಕದ ಬೆಲ್ಲದ ಗಟ್ಟಿಯನ್ನು ತರಿಸಲಾಗಿತ್ತು. ಈ ಬೆಲ್ಲದ ಗಣಪತಿಯನ್ನು ಕಲಾವಿದರಾದ ಲೋಕೇಶ್ ಚಿಟ್ಪಾಡಿ, ರವಿ ಹಿರೆಬೆಟ್ಟು, ವಾಸುದೇವ ಚಿಟ್ಪಾಡಿ ಅವರ ತಂಡ ನಾಜೂಕಾಗಿ, ಕಲಾತ್ಮಾಕವಾಗಿ ತಯಾರಿಸಿದೆ. ಸೋಮವಾರ ಬೆಳಗ್ಗೆಯಿಂದ ಸಾರ್ವಜನಿಕರ ವೀಕ್ಷಣೆಗೆ ಅನುವು ಮಾಡಿ ಕೊಡಲಾಗಿದೆ.