ಕಾರವಾರ: ಮದುವೆ ಎನ್ನುವಂತಹುದು ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಬರುವಂತಹ ಒಂದು ಅದ್ಭುತ ಕ್ಷಣ. ಹೆಚ್ಚಾಗಿ ಮದುವೆಯ ಕನಸುಗಳನ್ನು ನವ ಜೋಡಿಗಳು ಅದ್ದೂರಿಯಾಗಿ ಮದುವೆಯಾಗಬೇಕೆಂದು ಬಯಸುವುದು ಸಾಮಾನ್ಯ. ಆದ್ರೆ ಇಲ್ಲಿ ಮದುವೆ ಮಂಟಪವಿಲ್ಲದೇ, ಆಡಂಬರದ ಓಲಗವಿಲ್ಲದೇ, ಪುರೋಹಿತರ ಮಂತ್ರ ಘೋಷವಿಲ್ಲದೇ, ಮಾವಿನ ಮರದ ಕೆಳಗೆ ಮದುವೆಯಾಗಿ ವಧು, ವರ ಎಲ್ಲರ ಗಮನ ಸೆಳೆದಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಅಂಕೋಲದ ಅಂಗಡಿಬೈಲಿನ ಆತ್ಮೀಯ ಹಾಗೂ ಮಾಧವಿ ಎಂಬ ವಧು, ವರ ಈ ವಿಶೇಷ ರೀತಿಯಲ್ಲಿ ಮದುವೆಯಾಗಿದ್ದು, ಕುವೆಂಪು ಅವರ ಆದರ್ಶದಂತೆ ಮಂತ್ರ, ಮಾಂಗಲ್ಯ ಕಟ್ಟುವ ರೀತಿಯಲ್ಲಿ ಮದುವೆಯಾಗಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಒಟ್ಟು 31 ಓಮಿಕ್ರಾನ್ ಕೇಸ್ – 299 ಕೊರೊನಾ ಪ್ರಕರಣ
ಹೇಗಿತ್ತು ವಿವಾಹ?
ಕುವೆಂಪುರವರ ಆದರ್ಶದಂತೆ ಮಂತ್ರ, ಮಾಂಗಲ್ಯ ಕಟ್ಟುವಂತಹ ವಿವಾಹ ಇದಾಗಿತ್ತು. ಆದರೇ ಈ ಮದುವೆಯಲ್ಲಿ ಮಂತ್ರದ ಬದಲಿಗೆ ಜಾನಪದ ಹಾಡುಗಳು ಮದುವೆ ಮಂಟಪದಿಂದ ಕೇಳಿ ಬರುತ್ತಿತ್ತು.
ಮದುವೆಯಲ್ಲಿ ವಿವಾಹ ಸಂಹಿತೆಯನ್ನು ಮೂರು ಭಾಷೆಯಲ್ಲಿ ಮಹಿಳೆಯರೇ ಪಠಿಸಿದ್ದು ವಿಶೇಷವಾಗಿತ್ತು. ಕನ್ನಡದಲ್ಲಿ ಅಕ್ಷತಾ ಕೃಷ್ಣಮೂರ್ತಿ, ಇಂಗ್ಲೀಷ್‍ನಲ್ಲಿ ಶರಣ್ಯಾ, ಮರಾಠಿಯಲ್ಲಿ ಅಕ್ಷತಾ ರಾವ್ ಮಂತ್ರವನ್ನು ಓದಿದರು.
ಯಾವುದೇ ಆಧುನಿಕತೆ ಬಳಸದೇ, ಪರಿಸರಕ್ಕೆ ಪೂರಕವಾದ ವಸ್ತುಗಳನ್ನು ಮದುವೆ ಮನೆಯಲ್ಲಿ ಬಳಸಲಾಗಿತ್ತು. ಇಪ್ಪಿ ಹೂವಿನ ಮಾಲೆಯನ್ನು ಬದಲಾಯಿಸಿಕೊಂಡ ವಧು ವರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಊಟಕ್ಕೆ ಹುರಿಯಕ್ಕಿ ಲಾಡು, ಕಬ್ಬಿನ ಹಾಲು, ಈ ಮದುವೆಯ ವಿಶೇಷವಾಗಿದ್ದು ಎಲ್ಲರ ಗಮನ ಸೆಳೆಯಿತು. ಆಧುನಿಕತೆಯ ಈ ಕಾಲದಲ್ಲಿ ವೈಭವೀಕೃತವಾಗಿ ಮದುವೆಗಳು ಜರಗುತ್ತದೆ. ಆದರೆ ಈ ಮದುವೆ ಪರಿಸರಕ್ಕೆ ಪೂರಕವಾಗಿದ್ದು, ಮನೆ ಮುಂದಿರುವ ಮಾವಿನ ಮರವೇ ಮದುವೆ ಮಂಟಪವಾಗಿತ್ತು. ಪ್ಲಾಸ್ಟಿಕ್ ಸಂಪೂರ್ಣ ದೂರ ಇಡುವ ಜೊತೆ ಗಿಡಮರಗಳ ನಡುವೆ ಈ ಮದುವೆ ಜರುಗಿದ್ದು ಎಲ್ಲರ ಪ್ರಶಂಸೆಗೆ ಕಾರಣವಾಯಿತು. ಇದನ್ನೂ ಓದಿ: ಮತಾಂತರ ಕಾಯ್ದೆಯಿಂದ ಸಮಾಜಕ್ಕೆ ಒಳ್ಳೆದಾಗುತ್ತದೆ: ಅಶ್ವತ್ಥ್ ನಾರಾಯಣ