ಕೋಲಾರ: ಅವಧಿಗೂ ಮುನ್ನವೇ ತೋಟದಲ್ಲಿ ಬಾದಾಮಿ ಮಾವು ಹಾಗೂ ಬೇನಿಷ್(ಬಾಗಿನಪಲ್ಲಿ) ಮಾವು ಬೆಳೆದು ರೈತನ ಬಾಳನ್ನು ಬದಲಾಯಿಸಿದೆ.
ಮಾವಿನ ನಗರಿ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀನಿವಾಸಪುರ ತಾಲೂಕಿನ ಬಂಡಪಲ್ಲಿ ಗ್ರಾಮದ ಕೆಂಪರೆಡ್ಡಿ ಅವರ ತೋಟದಲ್ಲಿ ಮಾವು ಬೆಳೆದಿದೆ. ಶ್ರೀನಿವಾಸಪುರದಲ್ಲಿ ಶೇ.80 ರಷ್ಟು ಜನ ರೈತರು ನಾನಾ ರೀತಿಯ ಮಾವು ಬೆಳೆಯುತ್ತಾರೆ. ಅದೆಲ್ಲವೂ ಸದ್ಯ ಹೂ ಬಿಟ್ಟಿದೆ. ಆದರೆ ವಿಚಿತ್ರ ಎಂಬಂತೆ ಬಂಡಪಲ್ಲಿಯ ಕೆಂಪರೆಡ್ಡಿ ಅವರ ತೋಟದಲ್ಲಿ ಬೆಳೆದಿರುವ ಬಾಗಿನಪಲ್ಲಿ ಹಾಗೂ ಬಾದಾಮಿ ಅಕಾಲಿಕ ಮಾವು ಸದ್ಯ ಅಚ್ಚರಿ ಮೂಡಿಸಿದೆ.
Advertisement
Advertisement
ಸಾವಯವ ಗೊಬ್ಬರ ಬಳಕೆ ಮಾಡಿಕೊಂಡು ಸೀಸನ್ ಮಾವಿನ ಹಣ್ಣಿನ ನೈಜತೆಯಂತೆ ಉತ್ತಮ ಗುಣಮಟ್ಟದ ಮಾವು ಬೆಳೆದಿದ್ದಾರೆ. ತಮಗಿರುವ 6 ಎಕರೆ ಜಮೀನಿನ ಪೈಕಿ, ಅರ್ಧ ಎಕರೆ ಪ್ರದೇಶದಲ್ಲಿರುವ 30 ಮಾವಿನ ಗಿಡಗಳು ಡಿಸೆಂಬರ್-ಜನವರಿಯಲ್ಲಿ ಫಸಲು ಬಿಟ್ಟಿದ್ದು ಬಂಪರ್ ಬೆಲೆ ಸಿಕ್ಕಿದೆ. ಈಗಾಗಲೇ 2 ಟನ್‍ನಷ್ಟು ಮಾವನ್ನು ಮಾರಾಟ ಮಾಡಿರುವ ರೈತ ಕೆಂಪರೆಡ್ಡಿಗೆ ಎರಡೂವರೆ ಲಕ್ಷ ಲಾಭ ಸಿಕ್ಕಿದೆಯಂತೆ. ಒಂದೂವರೆ ಟನ್ ನಷ್ಟು ಫಸಲು ಮಾವಿನ ಗಿಡದಲ್ಲಿದ್ದು, 5 ಲಕ್ಷದಷ್ಟು ಲಾಭದ ನಿರೀಕ್ಷೆ ಇದ್ದು ಲಕ್ಕಿ ಮ್ಯಾಂಗೋ ಆಗಿ ಪರಿಣಮಿಸಿದೆ.
Advertisement
Advertisement
ಅಕಾಲಿಕ ಮಾವು ಕಾಣಿಸಿಕೊಳ್ಳುತ್ತಿದ್ದಂತೆ ಮೊದಲಿಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ವಿಜ್ಞಾನಿಗಳು ರೈತ ಕೆಂಪರೆಡ್ಡಿ ತೋಟಕ್ಕೆ ಭೇಟಿ ನೀಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕಾಲಕಾಲಕ್ಕೆ ಮಾವು ಬೆಳೆಯಲು ಬೇಕಾದ ಸೂಕ್ತ ಮಾಹಿತಿಯೊಂದಿಗೆ, ಫಸಲಿನ ಪೋಷಣೆ, ರಕ್ಷಣೆ ಕುರಿತು ರೈತರಿಗೆ ಮಾಹಿತಿ ನೀಡಿದ್ದಾರೆ. ಇದೆಲ್ಲದರ ಮಧ್ಯೆ ಅನ್ ಸೀಸನ್ ಮ್ಯಾಂಗೋ ಬೆಳೆದಿದ್ದು ಅಚ್ಚರಿಯಾದರು, ಮಾರುಕಟ್ಟೆ ಸಮಸ್ಯೆಯಾದಾಗ ತೋಟಗಾರಿಕೆ ಇಲಾಖೆ ರೈತರ ನೆರವಿಗೆ ಬಂದಿದೆ.
ಸಾವಯವ ಗೊಬ್ಬರ ಬಳಕೆ ಹಾಗೂ ಆರೋಗ್ಯಕ್ಕೆ ಹಾನಿಕಾರಕವಾಗದಂತೆ ಮಾವನ್ನು ಕೃತಕವಾಗಿ ಹಣ್ಣಾಗಿಸಿ ನಂತರ ಬೆಂಗಳೂರಿನ ಲಾಲ್‍ಬಾಗ್‍ನ ಫಲ ಪುಷ್ಪ ಪ್ರದರ್ಶನದಲ್ಲಿ ಮಾರಾಟ ಮಾಡಲು ಅನುವು ಮಾಡಿಕೊಟ್ಟಿದ್ದಾರೆ. ದಲ್ಲಾಳಿಗಳು ಹಾಗೂ ವ್ಯಾಪಾರಸ್ಥರ ಹಾವಳಿ ನಿಯಂತ್ರಣ ಮಾಡಿ ನೇರವಾಗಿ ರೈತರೇ ಲಾಲ್‍ಬಾಗ್ ನಲ್ಲಿ ವ್ಯಾಪಾರ ಮಾಡಿ ಲಾಭ ಪಡೆದಿದ್ದಾರೆ. ಸೀಸನ್ ಮಾವಿಗಾದರೆ ಕೆ.ಜಿ. ಗೆ 20 ರೂಪಾಯಿ ಮಾತ್ರ, ಆದರೆ ಈ ಮಾವು 250 ರೂ.ಗೆ ಮಾರಾಟ ಮಾಡಿ ಕೈ ತುಂಬಾ ಲಾಭ ಗಳಿಸಿದ್ದು, ಇದಕ್ಕೆ ಇಲಾಖೆ ಅಧಿಕಾರಿಗಳು ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv