– ಒಂದು ಲಕ್ಷಕ್ಕೂ ಅಧಿಕ ಪ್ರತಿಭಟನಾಕಾರರು ಭಾಗಿ
– ಐದು ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ
ಮಂಗಳೂರು: ಪೌರತ್ವ ಕಾಯಿದೆ ವಿರೋಧಿಸಿ, ಮಂಗಳೂರಿನಲ್ಲಿ ಮುಸ್ಲಿಂ ಸಂಘಟನೆಗಳು ನಡೆಸಿದ ಬೃಹತ್ ಪ್ರತಿಭಟನಾ ಸಭೆ ನಿರೀಕ್ಷೆಗೂ ಮೀರಿ ಶಾಂತಿಯುತವಾಗಿ ಯಶಸ್ಸು ಕಂಡಿದ್ದು,ಈ ಮೂಲಕ ಮುಸ್ಲಿಂ ಸಂಘಟನೆಗಳು ತಮ್ಮ ಶಕ್ತಿ ಪ್ರದರ್ಶನ ಮಾಡಿದೆ. ಮಂಗಳೂರು ನಗರದ ಹೊರವಲಯದ ಅಡ್ಯಾರ್ ನಲ್ಲಿ ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಸೇರಿದ ಪ್ರತಿಭಟನಾಕಾರರು ಕೇಂದ್ರದ ವಿರುದ್ದ, ಪೌರತ್ವ ಕಾಯಿದೆಯ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಸಮಾವೇಶ ನಡೆದ ಅಡ್ಯಾರ್ ಮೈದಾನದ ತುಂಬಾ ತ್ರಿವರ್ಣ ಧ್ವಜ ಹಾರಾಡಿದ್ದು,ಪೌರತ್ವ ಕಾಯಿದೆ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ..ಮಂಗಳೂರು ಗೋಲಿಬಾರ್ ಪ್ರಕರಣದ ನಂತರ ಮೊದಲ ಬಾರಿಗೆ ಮಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆದಿದ್ದು, ಪೊಲೀಸರ ವಿರುದ್ಧವೂ ಫ್ಲೇ ಕಾರ್ಡ್ ಪ್ರದರ್ಶನ ಮಾಡಲಾಗಿದೆ..ಮಂಗಳೂರು ನಗರ ಪೊಲೀಸ್ ಕಮೀಷನರ್ ಡಾ.ಪಿ ಎಸ್ ಹರ್ಷ ವಿರುದ್ಧವೂ ಸಮಾವೇಶದಲ್ಲಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕಾರ್ಯಕ್ರಮ ನಡೆದಿದ್ದು. ಮಾಜಿ IAS ಅಧಿಕಾರಿಗಳಾದ ಹರ್ಷ ಮಂದರ್,ಕೇರಳದ ಕಣ್ಣನ್ ಗೋಪಿನಾಥನ್ ಸೇರಿದಂತೆ ಮುಸ್ಲಿಂ ಸಂಘಟನೆಗಳ ಪ್ರಮುಖರು ಭಾಷಣ ಮಾಡಿ ಜನಾಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಸ್ಲಿಂ ಸಂಘಟನೆಗಳ ಬೃಹತ್ ಸಮಾವೇಶದ ಹಿನ್ನಲೆಯಲ್ಲಿ ಮಂಗಳೂರು ನಗರದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಕಾನೂನು ಸುವ್ಯವಸ್ಥೆ ವಿಭಾಗದ ADGP ಅಮರ್ ಕುಮಾರ್ ಪಾಂಡೆ ಮಂಗಳೂರಿನಲ್ಲೇ ಬೀಡು ಬಿಟ್ಟಿದ್ದು ಒಟ್ಟು 5 ಸಾವಿರ ಪೊಲೀಸರಿಂದ ಭಧ್ರತೆ ನೀಡಲಾಗಿದೆ. ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ಕ್ಕೆ ತಾಗಿಕೊಂಡಿರುವ ಮೈದಾನದಲ್ಲಿ ಕಾರ್ಯಕ್ರಮ ನಡೆದಿದ್ದು,ಮಧ್ಯಾಹ್ನದ ನಂತರ ಹೆದ್ದಾರಿಯಲ್ಲಿ ವಾಹನ ಸಂಚಾರ ನಿರ್ಬಂಧ ಮಾಡಲಾಗಿತ್ತು. ಕೇರಳದಿಂದ ಪ್ರತಿಭಟನಗೆ ಕಿಡಿಗೇಡಿಗಳು ಬರುವ ಮಾಹಿತಿ ಹಿನ್ನಲೆಯಲ್ಲಿ ಪೊಲೀಸರು ,ರೈಲ್ವೇ ನಿಲ್ದಾಣ,ಗಡಿ ಭಾಗದ ಚೆಕ್ ಪೋಸ್ಟ್ ಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ.
ಒಟ್ಟಿನಲ್ಲಿ ಪೊಲೀಸರಿಗೆ ತಲೆನೋವಾಗಿದ್ದ ಮುಸ್ಲಿಂ ಸಂಘಟನೆಗಳ ಪ್ರತಿಭಟನಾ ಸಮಾವೇಶ ಶಾಂತವಾಗಿ ನಡೆದಿದ್ದು ಪೊಲೀಸರು ನಿರಾಳರಾಗಿದ್ದಾರೆ..ಕೇಂದ್ರ ಸರ್ಕಾರದ ಮತ್ತು ಪೊಲೀಸರ ವಿರುದ್ಧ ಮುಸ್ಲಿಂ ಸಂಘಟನೆಗಳು ಶಕ್ತಿ ಪ್ರದರ್ಶನ ಮಾಡಿದ್ದು,ಮಂಗಳೂರಿನ ಕಾವು ಸ್ವಲ್ಪ ಮಟ್ಟಿಗೆ ತಣ್ಣಗಾಗಿದೆ.