ಬೆಳಗಾವಿ: ಕೃಷಿ ಸಾಲಕ್ಕೆ ಅಡವಿಟ್ಟ ಮಾಂಗಲ್ಯ ಸರವನ್ನೇ ಐಸಿಐಸಿಐ ಬ್ಯಾಂಕ್ ಮಾರಿಕೊಂಡಿರುವ ಘಟನೆ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ನಡೆದಿದೆ.
ಕೃಷಿಗೆ ಸಂಬಂಧಿಸಿದಂತೆ ಸಾಲ ಪಡೆಯಲು 50 ಸಾವಿರ ರೂ.ಗೆ ಪತ್ನಿಯ 48 ಗ್ರಾಂ. ಚಿನ್ನದ ಮಾಂಗಲ್ಯ ಸರವನ್ನು ಹರೀಶ್ ಮಿರಜಕರ್ ನವೆಂಬರ್ 28, 2018 ರಂದು ಐಸಿಐಸಿಐ ಬ್ಯಾಂಕಿನಲ್ಲಿ ಅಡವಿಟ್ಟಿದ್ದರು. 10 ತಿಂಗಳವರೆಗೆ ಬಡ್ಡಿ ತುಂಬದಿದ್ದಕ್ಕೆ ಕಷ್ಟವಿದೆ ಎಂದು ಅಡವಿಟ್ಟಿದ್ದ ಮಾಂಗಲ್ಯ ಸರವನ್ನೇ ಬ್ಯಾಂಕ್ ಸಿಬ್ಬಂದಿ ಮಾರಿಕೊಂಡಿದ್ದಾರೆ.
ಹರೀಶ್ ಮಿರಜಕರ್ ಕುಟುಂಬಕ್ಕೆ ಯಾವುದೇ ಮಾಹಿತಿ, ನೋಟಿಸ್ ನೀಡದೇ ಹರಾಜು ಮಾಡಿ ಬ್ಯಾಂಕಿನವರು ಮಾರಿಕೊಂಡಿದ್ದಾರೆ. 1,23,000 ಬ್ಯಾಂಕ್ ಅಧಿಕಾರಿಗಳು ಮಾರಿಕೊಂಡಿದ್ದಾರೆ. ತಮ್ಮ ಬಡ್ಡಿ ಹಣ ಅಸಲು ಕಟ್ ಮಾಡಿಕೊಂಡು ಉಳಿದ ಹಣವನ್ನು ಹರೀಶ್ ಖಾತೆಗೆ ಡಿಪಾಸಿಟ್ ಮಾಡಿದ್ದಾರೆ. ಹರೀಶ್ ತಂದೆ, ತಾಯಿ ಈ ಕುರಿತು ನೊಂದುಕೊಂಡಿದ್ದು, ನಮ್ಮ ಸೊಸೆಯ ಮಾಂಗಲ್ಯ ಸರವನ್ನು ಕೊಡಿ ಎಂದು ಬ್ಯಾಂಕ್ ಮುಂದೆ ಕಣ್ಣೀರು ಹಾಕುತ್ತಿದ್ದಾರೆ.
ಬ್ಯಾಂಕಿನಲ್ಲಿ ಅಡವಿಟ್ಟ ಮಾಂಗಲ್ಯ ಸರಕ್ಕೆ ಒಂದು ವರ್ಷ ಅವಧಿ ಇದ್ದರೂ, ಒಂದು ವರ್ಷದೊಳಗೆಯೇ ಐಸಿಐಸಿಐ ಬ್ಯಾಂಕಿನವರು ಹರಾಜು ಹಾಕಿದ್ದಾರೆ. ನಮಗೆ ನಮ್ಮ ಸೊಸೆಯ ಮಾಂಗಲ್ಯ ಸರವನ್ನು ಕೊಡಿ ಎಂದು ಹರೀಶ್ ತಂದೆ, ತಾಯಿ ಬ್ಯಾಂಕಿಗೆ ಅಲೆದಾಡುತ್ತಿದ್ದಾರೆ. ಅಲ್ಲದೆ, ನಿತ್ಯ ಬ್ಯಾಂಕಿಗೆ ಬಂದು ವೃದ್ಧರು ಕಣ್ಣೀರಿಡುತ್ತಿದ್ದಾರೆ. ಆದರೆ ಈ ಕುರಿತು ಬ್ಯಾಂಕ್ ಅಧಿಕಾರಿಗಳು ನಾವೇನೂ ಮಾಡಲು ಸಾಧ್ಯವಿಲ್ಲ. ಅದನ್ನು ಮಾರಿಬಿಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ.