ಕಾರೊಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿ – ಯುವಕನನ್ನು ಹಿಡಿದ ಪೊಲೀಸರು

Public TV
1 Min Read
mng car

– ಮದ್ಯದ ಅಮಲಿನಲ್ಲಿದ್ದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿ

ಮಂಗಳೂರು: ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕಾಲೇಜು ವಿದ್ಯಾರ್ಥಿನಿಯೋರ್ವಳನ್ನು ಕಾರಿನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದ ಯುವಕನೋರ್ವ ಸಾರ್ವಜನಿಕರಿಗೆ ಸಿಕ್ಕಿ ಬಿದ್ದ ಘಟನೆ ಮಂಗಳೂರಿನ ಸುರತ್ಕಲ್ ಸಮೀಪ ನಡೆದಿದೆ.

ಸುರತ್ಕಲ್ ಪರಿಸರದಲ್ಲಿ ಕಾರೊಂದರ ಮುಂದಿನ ಸೀಟ್ ನಲ್ಲಿ ಯುವತಿಯೋರ್ವಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದಳು. ಯುವಕನೋರ್ವ ಗಾಬರಿಯಿಂದ ವೇಗವಾಗಿ ಕಾರು ಚಲಾಯಿಸುತ್ತಾ ಹೋಗುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಹೀಗಾಗಿ ಈ ಕಾರನ್ನು ಇತರೆ ವಾಹನ ಸವಾರರು ಹಿಂಬಾಲಿಸಿ ಸುರತ್ಕಲ್ ನ ಕುಳಾಯಿ ಎಂಬಲ್ಲಿ ತಡೆದು ನಿಲ್ಲಿಸಿದ್ದಾರೆ.

ಆತನಲ್ಲಿ ಪ್ರಶ್ನಿಸುವಾಗ ಈಕೆ ತನ್ನ ಗೆಳತಿ ಎಂದಿದ್ದು ಆಕೆಯ ಪ್ರಜ್ಞಾಹೀನ ಸ್ಥಿತಿಗೆ ಕಾರಣ ಏನು ಎಂಬುದನ್ನು ಸರಿಯಾಗಿ ಹೇಳದೆ ಚಡಪಡಿಸುತ್ತಿದ್ದ. ಸ್ಥಳೀಯರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಂತೆ ಯುವಕ ಎಲ್ಲರ ಎದುರಲ್ಲೇ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಪರಾರಿಯಾಗಿದ್ದ. ಯುವತಿ ಆಗಲೂ ಪ್ರಜ್ಞಾಹೀನ ಸ್ಥಿತಿಯಲ್ಲೇ ಇದ್ದುದ್ದರಿಂದ ಸ್ಥಳೀಯರು ಆತನ ಕಾರು ನಂಬರ್ ಸಮೇತ ಪೊಲೀಸರಿಗೆ ಮಾಹಿತಿ ನೀಡಿದ್ದರು.

Police Jeep

ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಕಾರನ್ನು ದಾರಿ ಮಧ್ಯೆ ತಡೆದು ಸುರತ್ಕಲ್ ಪೊಲೀಸ್ ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ಬಾಯಿಬಿಟ್ಟಿದ್ದು, ಯುವತಿ ಮಂಗಳೂರಿನ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿನಿಯಾಗಿದ್ದು ತನ್ನ ಗೆಳತಿ ಎಂದು ಹೇಳಿದ್ದ. ಜೊತೆಗೆ ಸ್ನೇಹಿತರೆಲ್ಲ ಸೇರಿ ಸುರತ್ಕಲ್ ಬೀಚ್ ನಲ್ಲಿ ಪಾರ್ಟಿ ಮಾಡಿದ್ದು, ಈ ಸಂದರ್ಭ ಯುವತಿ ಮದ್ಯಪಾನ ಸೇವಿಸಿದ್ದು ಅದರ ಪರಿಣಾಮ ಆಕೆ ಪ್ರಜ್ಞೆ ಇಲ್ಲದಂತಾಗಿದೆ. ನಾನು ಆಕೆಯನ್ನು ಆಕೆಯ ಮನೆಗೆ ಬಿಡಲು ಹೋಗುತ್ತಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡು, ಆಕೆಗೆ ಪ್ರಜ್ಞೆ ಬಂದ ಬಳಿಕ ಇಬ್ಬರನ್ನು ಕಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *