ಮಂಗಳೂರು: ಬಾವಿಗೆ ಬಿದ್ದ ನಾಯಿಯನ್ನು ಮಹಿಳೆಯೊಬ್ಬರು ತಾವೇ ಬಾವಿಯಲ್ಲಿ ಇಳಿದು ರಕ್ಷಿಸಿ ಮಾನವೀಯತೆ ಮೆರೆದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಎಂ.ಜಿ ರಸ್ತೆ ಬಳಿಯಲ್ಲಿರುವ ಬಲ್ಲಾಳ್ ಬಾಗ್‍ನ ಬಿರುವೆರ್ ಕುಡ್ಲ ಮೈದಾನದ ಪಕ್ಕದ ಈ ಬಾವಿಗೆ ಒಂದು ಕಪ್ಪು ಬಣ್ಣದ ನಾಯಿ ಬಿದ್ದಿತ್ತು. ಆಹಾರ ಹುಡುಕುತ್ತ ಬಂದ ಬೀದಿ ನಾಯಿ ಈ ಬಾವಿಗೆ ಬಿದ್ದು ಮೇಲೆ ಬರಲಾಗದೆ ಒದ್ದಾಡುತ್ತಿತ್ತು. ಸುಮಾರು ಎರಡು ಗಂಟೆಯಾದರೂ ಬಾವಿಯೊಳಗೆ ಬಿದ್ದಿದ್ದ ನಾಯಿಯನ್ನು ಯಾರು ರಕ್ಷಿಸಿರಲಿಲ್ಲ. ಬಾವಿಯಿಂದ ನಾಯಿ ಕೂಗುತ್ತಿದ್ದ ಸದ್ದನ್ನು ಕೇಳಿದ ಮಹಿಳೆಯೊಬ್ಬರು ಈ ಬಾವಿಯ ಒಳಗಡೆ ನೋಡಿದ್ದಾರೆ. ಬಳಿಕ ಅಲ್ಲೇ ಆಟವಾಡಲು ಬಂದ ಯುವಕರ ತಂಡಕ್ಕೆ ಈ ವಿಚಾರವನ್ನು ಹೇಳಿದ್ದಾರೆ. ಯುವಕರ ತಂಡ ಒಂದು ಹಗ್ಗದಲ್ಲಿ ಟಯರ್ ಕಟ್ಟಿ ಅದನ್ನು ಬಾವಿಯ ಒಳಗೆ ಹಾಕಿ ನಾಯಿಯನ್ನು ರಕ್ಷಣೆ ಮಾಡಲು ಮುಂದಾದರು.
Advertisement
Advertisement
ಆದರೆ ಸುಸ್ತಾಗಿದ್ದ ನಾಯಿ ಈಜುತ್ತಲೇ ಬಾವಿಯ ಒಂದು ಬದಿಯಲ್ಲಿ ರಂಧ್ರವನ್ನು ಕೊರೆದು ಅಲ್ಲೇ ತನ್ನ ಜೀವವನ್ನು ರಕ್ಷಣೆ ಮಾಡಿಕೊಂಡಿತ್ತು. ಇನ್ನು ಯಾವ ಯುವಕರು ಕೂಡ ಬಾವಿಯ ಒಳಗೆ ಇಳಿದು ಆ ನಾಯಿಯನ್ನು ರಕ್ಷಣೆ ಮಾಡುವ ಧೈರ್ಯ ಮಾಡುವ ಕೆಲಸಕ್ಕೆ ಮುಂದಾಗಲಿಲ್ಲ. ಆಗ ಅವರಿಗೆ ನೆನಪಾಗಿದ್ದು, ಪ್ರಾಣಿಗಳ ಮೇಲೆ ಪ್ರೀತಿ ಇಟ್ಟುಕೊಂಡಿದ್ದ ರಜಿನಿ. ಹೌದು ಬಾಂಬೆ ಮೂಲದವರಾದ ರಜಿನಿ ಮದುವೆಯಾದ ಬಳಿಕ ಮಂಗಳೂರಿನಲ್ಲೇ ನೆಲೆಸಿದ್ದಾರೆ. ಪ್ರಾಣಿ ಪ್ರೀತಿ ಹೊಂದಿರುವ ಇವರ ಬಗ್ಗೆ ತಿಳಿದ ಯುವಕರು ಅವರಿಗೆ ಕರೆ ಮಾಡಿದ ತಕ್ಷಣ ರಜಿನಿ ಸ್ಥಳಕ್ಕೆ ಬಂದಿದ್ದು, ನಾಯಿಯ ರಕ್ಷಣೆಗೆ ನಿಂತರು.
Advertisement
ನಾಯಿಯ ಒದ್ದಾಟವನ್ನು ನೋಡಿದ ರಜಿನಿ ಹಿಂದೆ ಮುಂದೆ ನೋಡದೇ 15 ಅಡಿ ನೀರಿದ್ದ ಬಾವಿಗೆ ಇಳಿದಿದ್ದಾರೆ. ಹಗ್ಗ ಕಟ್ಟಿಕೊಂಡು ಇಳಿದ ರಜನಿ ನಾಯಿಯ ಬಳಿ ಹೋದರು. ಆಗ ನಾಯಿ ಗಾಬರಿಯಾಗಿ ಇವರಿಗೆ ಕಚ್ಚಲು ಮುಂದಾಗಿತ್ತು. ಆದರೂ ಕಷ್ಟಪಟ್ಟು ಹಗ್ಗವನ್ನು ಹಿಡಿದುಕೊಂಡೆ ನಾಯಿಯ ತಲೆಯನ್ನು ಸವರುತ್ತಾ ರಜಿನಿ ನಾಯಿನ್ನು ರಕ್ಷಣೆ ಮಾಡಿ ಮೇಲೆತ್ತಿಕೊಂಡು ಬಂದರು.
Advertisement
ಪ್ರಾಣಿ ಪ್ರೀತಿಯಿಂದ ಸುತ್ತಾಮುತ್ತಲು ಹೆಸರುಗಳಿಸಿದ್ದ ರಜಿನಿ ಈಗ ಸಾಹಸ ಮೆರೆದು ಇಡೀ ಕರಾವಳಿಯಲ್ಲಿ ಮನೆ ಮಾತಾಗಿದ್ದಾರೆ. ಯಾಕಂದರೆ ಇವರು ಸಾಹಸ ಮಾಡಿ ನಾಯಿಯನ್ನು ರಕ್ಷಿಸಿರುವ ವಿಡಿಯೋ ಕರಾವಳಿಯಾದ್ಯಂತ ಫುಲ್ ವೈರಲ್ ಆಗಿದೆ. ಜೀವ ಉಳಿಸಿಕೊಂಡ ನಾಯಿ ಬದುಕಿದೆಯಾ ಬಡಜೀವವೇ ಅಂತ ಅಲ್ಲಿಂದ ಕಾಲ್ಕಿತ್ತಿದೆ.