ಮಂಗಳೂರು: ಪುಲ್ವಾಮಾ ದುರ್ಘಟನೆಗೆ ಒಂದು ವರ್ಷ ಸಂದ ಹಿನ್ನೆಲೆಯಲ್ಲಿ ಮಂಗಳೂರು ನಗರ ದಕ್ಷಿಣ ಶಾಸಕ ಡಿ. ವೇದವ್ಯಾಸ್ ಕಾಮತ್ ನಗರದ ಕದ್ರಿ ಯುದ್ಧ ಸ್ಮಾರಕಕ್ಕೆ ತೆರಳಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದ್ದಾರೆ.
ಈ ಸಂಧರ್ಭದಲ್ಲಿ ಮಾತನಾಡಿದ ಅವರು, ನಮ್ಮೆಲ್ಲರ ಸುಖ ನಿದ್ರೆಯ ಹಿಂದೆ ನಿದ್ದೆಗೆಟ್ಟು ಗಡಿ ಕಾಯುವ ಯೋಧರ ಪರಿಶ್ರಮವಿದೆ. ಅವರ ನಿಸ್ವಾರ್ಥ ಸೇವೆಗೆ ಗೌರವ ಸಲ್ಲಿಸುವ ಮೂಲಕ ಯೋಧರ ಜೊತೆ ನಾವಿದ್ದೇವೆ ಎನ್ನುವ ಸಂದೇಶ ನೀಡಬೇಕು. ಪುಲ್ವಾಮಾದಲ್ಲಿ ಹುತಾತ್ಮರಾದ ಎಲ್ಲಾ ಯೋಧರನ್ನೂ ನೆನೆಯುವುದು ನಮ್ಮ ಕರ್ತವ್ಯ ಎಂದರು.
Advertisement
Advertisement
ದೇಶದ ಗಡಿಯಲ್ಲಿ ಮಳೆ ಬಿಸಿಲೆನ್ನದೆ, ರಕ್ತ ಹೆಪ್ಪುಗಟ್ಟುವ ಚಳಿಯಲ್ಲಿ ಯೋಧರು ದೇಶವನ್ನು ಕಾಯುತ್ತಿದ್ದಾರೆ. ಅವರ ತ್ಯಾಗ, ಬಲಿದಾನದಿಂದ ನಾವೆಲ್ಲ ನಿಶ್ಚಿಂತರಾಗಿದ್ದೇವೆ. ತಾಯಿ ಭಾರತೀಯ ವೀರ ಕುವರರಿಗೆ ಭಾರತೀಯರು ನಮ್ಮ ಜೊತೆಗಿದ್ದಾರೆ ಎನ್ನುವ ಭಾವನೆಯಿದ್ದರೆ ಅವರ ಮನೋಬಲ ಮತ್ತಷ್ಟು ಬಲಿಷ್ಠವಾಗುತ್ತದೆ ಎಂದರು.
Advertisement
ನಮ್ಮ ಮಕ್ಕಳಿಗೆ ದೇಶಾಭಿಮಾನ, ತ್ಯಾಗ ಬಲಿದಾನದ ಕಥನಗಳನ್ನು ತಿಳಿಸಿ ಬೆಳೆಸಬೇಕು. ಮಕ್ಕಳ ಮನಸ್ಸಿನಲ್ಲಿ ರಾಷ್ಟ್ರೀಯ ಭಾವನೆಗಳನ್ನು ತುಂಬುವ ಕಾರ್ಯ ಕಡಿಮೆಯಾದರೆ ಈ ದೇಶಕ್ಕೆ ಭವಿಷ್ಯವಿಲ್ಲ. ಪ್ರತಿಯೊಂದು ಮಗುವಿಗು ಕೂಡ ಭಾರತದ ಬಗೆಗಿನ ಅಭಿಮಾನವನ್ನು ತಿಳಿಸಿಕೊಟ್ಟು ಭವ್ಯ ಭಾರತದ ನಿರ್ಮಾಣಕ್ಕೆ ಎಳೆಯ ವಯಸ್ಸಿನಲ್ಲಿಯೇ ಬುನಾದಿ ಹಾಕಿಕೊಡಬೇಕು ಎಂದು ತಿಳಿಸಿದರು.
Advertisement
ಈ ಸಂದರ್ಭದಲ್ಲಿ ಸ್ಥಳೀಯ ಮನಪಾ ಸದಸ್ಯರಾದ ಶಕೀಲಾ ಕಾವಾ, ಬಿಜೆಪಿ ಮುಖಂಡರಾದ ವಸಂತ್ ಜೆ ಪೂಜಾರಿ, ಹಿಂದೂ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಆರ್ ಶೆಟ್ಟಿ, ಜ್ಞಾನ ಸಂಜೀವಿನಿ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.