– ಪುಲ್ವಾಮಾ ನೆನಪಿಗೆ ಹುತಾತ್ಮದಿನ ಆಚರಿಸಲು ಕರೆ
ಮಂಗಳೂರು: ವಿಶ್ವದೆಲ್ಲೆಡೆ ಪ್ರೇಮಿಗಳ ದಿನಾಚರಣೆಯ ಸಂಭ್ರಮಕ್ಕೆ ಯುವ ಪ್ರೇಮಿಗಳು ಕಾತುರತೆಯಿಂದ ಕಾಯುತ್ತಿದ್ದರೆ ರಾಜ್ಯದ ಕಡಲನಗರಿ ಮಂಗಳೂರಿನಲ್ಲಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಮತ್ತೆ ತಗಾದೆ ಎತ್ತಿವೆ. ಪ್ರೇಮಿಗಳ ದಿನಾಚರಣೆಗೆ ಬಹಿರಂಗ ವಿರೋಧ ವ್ಯಕ್ತಪಡಿಸಿರುವ ವಿಎಚ್‍ಪಿ ವ್ಯಾಲೆಂಟೆನ್ಸ್ ಡೇ ಆಚರಿಸದಂತೆ ಎಚ್ಚರಿಕೆ ನೀಡಿವೆ.
ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಕಳೆದ ವರ್ಷ ಫೆಬ್ರವರಿ 14ರಂದು ಉಗ್ರರ ಬಾಂಬ್ ದಾಳಿಗೆ 44 ಯೋಧರು ಹುತಾತ್ಮರಾಗಿದ್ದರು. ಅವರ ನೆನಪಿಗೆ ಹುತಾತ್ಮ ದಿನ ಆಚರಿಸುವಂತೆ ಬಜರಂಗದಳ ಕರೆ ನೀಡಿದೆ. ಇದಲ್ಲದೆ ಮಂಗಳೂರು ನಗರದ ಎಲ್ಲಾ ಹೂವು ಮತ್ತು ಗಿಫ್ಟ್ ಸೆಂಟರ್‍ಗಳಿಗೆ ಭೇಟಿ ನೀಡಿ, ಪ್ರೇಮಿಗಳ ದಿನಾಚರಣೆಗೆ ಬೆಂಬಲ ನೀಡದಂತೆ ಮನವಿ ಮಾಡಿದ್ದೇವೆ ಎಂದು ವಿಎಚ್‍ಪಿ ಮುಖಂಡ ಸುನೀಲ್ ಕೆ.ಆರ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
Advertisement
Advertisement
ಪ್ರೇಮಿಗಳ ದಿನಕ್ಕೆ ಭರ್ಜರಿ ಸಿದ್ಧತೆ:
ಬಜರಂಗದಳದ ವಿರೋಧದ ನಡುವೆಯೂ ಹೂವಿನ ಅಂಗಡಿಗಳು ಮಾತ್ರ ಪ್ರೇಮಿಗಳ ದಿನಾಚರಣೆಗೆ ಸಜ್ಜಾಗಿವೆ. ಅಂಗಡಿಗಳ ಮುಂದೆ ಕೆಂಪು ಗುಲಾಬಿಯ ಅಲಂಕಾರ ಮಾಡುವ ಮೂಲಕ ಪ್ರೇಮಿಗಳ ಮನ ಸೆಳೆಯುವಂತೆ ಮಾಡಿವೆ. ಟೆಡ್ಡಿ ಬೇರ್, ಗಿಫ್ಟ್ ಬಾಕ್ಸ್, ವೆರೈಟಿ ಚಾಕೊಲೇಟ್‍ಗಳು ಪ್ರೇಮಿಗಳಿಗಾಗಿ ತಯಾರುಗೊಂಡಿವೆ. ಪ್ರೇಮಿಗಳೂ ಅತಿ ಉತ್ಸಾಹದಿಂದ ಗಿಫ್ಟ್, ಹೂವಿನ ಗುಚ್ಛ ಖರೀದಿಯಲ್ಲಿ ತೊಡಗಿದ್ದಾರೆ ಎಂದು ನಗರದ ಬಂಟ್ಸ್ ಹಾಸ್ಟೆಲ್‍ನ ಗಿಫ್ಟ್ ಅಂಗಡಿಯ ಸಿಬ್ಬಂದಿ ಕಿಶೋರ್ ಹೇಳಿದ್ದಾರೆ.
Advertisement
Advertisement
ಲವರ್ಸ್ ಡೇ ಮಾಡಿಯೇ ಸಿದ್ಧ:
ಯುವ ಪ್ರೇಮಿಗಳು, ಲವರ್ಸ್ ಡೇ ಮಾಡಿಯೇ ಸಿದ್ಧ ಅಂತಾ ಬಜರಂಗದಳ ಮತ್ತು ವಿಎಚ್‍ಪಿಗೆ ಸವಾಲೆಸಿದಿದ್ದಾರೆ. ಮದರ್ಸ್ ಡೇ, ಫಾದರ್ಸ್ ಡೇ ರೀತಿ ಪ್ರೇಮಿಗೆ ಪ್ರೇಮವನ್ನು ಹಂಚಿಕೊಳ್ಳವುದಕ್ಕೂ ಒಂದು ದಿನ ಬೇಕು. ಆ ದಿನವನ್ನು ಸಂತೋಷದಿಂದ ಆಚರಿಸುವುದಾಗಿ ಹೇಳಿದ್ದಾರೆ.
ಒಟ್ಟಿನಲ್ಲಿ ಪ್ರೇಮಿಗಳ ದಿನಾಚರಣೆಗೆ ಪ್ರತಿ ವರ್ಷದಂತೆ ಈ ಬಾರಿಯೂ ಬಜರಂಗದಳ ವಿರೋಧ ವ್ಯಕ್ತಪಡಿಸಿದ್ದು, ಭಯ ಮಿಶ್ರಿತ ವಾತವರಣದಲ್ಲಿ ಯುವ ಜೋಡಿಗಳು ಪ್ರೇಮಿಗಳ ದಿನಾಚರಣೆ ಮಾಡುವಂತಾಗಿದೆ. ಕಳೆದ ವರ್ಷವೂ ಪ್ರೇಮಿಗಳ ದಿನದಂದು ಕೆಲ ಕಾರ್ಯಕರ್ತರು ಪುಂಡಾಟ ಮೆರೆದಿದ್ದು, ಪೊಲೀಸ್ ಭದ್ರತೆಯೊಂದಿಗೆ ಮಂಗಳೂರಿನಲ್ಲಿ ಪ್ರೇಮಿಗಳ ದಿನಾಚರಣೆ ನಡೆದಿತ್ತು.