– ಗೃಹ ಇಲಾಖೆಗೆ ಗುಪ್ತಚರ ಇಲಾಖೆಯಿಂದ ಸ್ಫೋಟಕ ಮಾಹಿತಿ
– ಮೂಲಭೂತವಾದಿ ಸಂಘಟನೆಯಿಂದ ಹತ್ಯೆಗೆ ಸಂಚು
– ಕರೆ ಮಾಡಿ ಭದ್ರತೆ ತೆಗೆದುಕೊಳ್ಳಿ ಎಂದ ಬೊಮ್ಮಾಯಿ
ಬೆಂಗಳೂರು: ದಕ್ಷಿಣ ಕನ್ನಡ ಪ್ರಭಾವಿ ಕಾಂಗ್ರೆಸ್ ಮುಖಂಡ, ಮಾಜಿ ಆರೋಗ್ಯ ಸಚಿವ ಯುಟಿ ಖಾದರ್ ಅವರ ಹತ್ಯೆಗೆ ಮೂಲಭೂತವಾದಿ ಸಂಘಟನೆ ಸ್ಕೆಚ್ ರೂಪಿಸಿದ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.
ಮೈಸೂರು ಶಾಸಕ ತನ್ವೀರ್ ಸೇಠ್ ಅವರ ಹತ್ಯೆಗೆ ಸಂಚು ರೂಪಿಸಿದಂತೆ ಸಂಘಟನೆಯೊಂದು ಖಾದರ್ ಹತ್ಯೆಗೆ ಸ್ಕೆಚ್ ಹಾಕಿದೆ ಎಂದು ಗುಪ್ತಚರ ಇಲಾಖೆ ಸರ್ಕಾರಕ್ಕೆ ತಿಳಿಸಿದೆ.
Advertisement
Advertisement
ಗುಪ್ತಚರ ಇಲಾಖೆ ಈ ವಿಚಾರ ತಿಳಿಸಿದ ಬೆನ್ನಲ್ಲೇ ಎಚ್ಚರಗೊಂಡ ಸರ್ಕಾರ ಖಾದರ್ ಅವರಿಗೆ ಭದ್ರತೆ ಹೆಚ್ಚು ಮಾಡಲು ಸೂಚಿಸಿದೆ. ಆದರೆ ಖಾದರ್ ನನಗೆ ಯಾವುದೇ ಜೀವಭಯ ಇಲ್ಲ ಎಂದು ಹೇಳಿ ಭದ್ರತೆಯನ್ನು ನಿರಾಕರಿಸಿದ್ದಾರೆ. ಭದ್ರತೆ ನಿರಾಕರಿಸಿದ ವಿಚಾರ ತಿಳಿದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಿದ್ದರಾಮಯ್ಯ ಮೂಲಕ ಖಾದರ್ ಅವರ ಮನ ಒಲಿಸಲು ಮುಂದಾಗಿದ್ದಾರೆ.
Advertisement
ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಖಾದರ್, ನನಗೆ ಜೀವ ಬೆದರಿಕೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ವತ: ಗೃಹ ಸಚಿವರು ನನಗೆ ಕರೆ ಮಾಡಿ ಹೇಳಿ ಭದ್ರತೆ ಪಡೆಯುವಂತೆ ಹೇಳಿದ್ದಾರೆ. ಆದರೆ ಓರ್ವ ಪೋಲಿಸ್ ಸಿಬ್ಬಂದಿಯನ್ನು ಭದ್ರತೆ ನೀಡಲು ಸರ್ಕಾರ ಮುಂದಾಗಿದೆ. ಇಂತಹ ಕಾಟಾಚಾರದ ಭದ್ರತೆ ನನಗೆ ಬೇಡ ಅಂತ ನಾನು ಸಿಬ್ಬಂದಿಯನ್ನು ವಾಪಸ್ ಕಳುಹಿಸಿದ್ದೇನೆ ಎಂದು ತಿಳಿಸಿದ್ದಾರೆ.
Advertisement
ಎಸಿಪಿ ಒಬ್ಬರು ಮನೆಗೆ ಬಂದು ಮಾತನಾಡಿದ್ದಾರೆ. ಭದ್ರತೆ ಕೊಟ್ಟರೆ ಸರಿಯಾಗಿ ಕೊಡಬೇಕು. ಒಬ್ಬ ಪೊಲೀಸರ ಭದ್ರತೆ ಕೊಟ್ಟು ಹೆಚ್ಚು ಕಡಿಮೆ ಯಾದರೆ ಯಾರು ಹೊಣೆ? ತನ್ವೀರ್ ಸೇಟ್ ಅವರಿಗೂ ಓರ್ವ ಗನ್ ಮೆನ್ ಕೊಟ್ಟಿದ್ದರು. ಘಟನೆಯಾದ ನಂತರ ಆ ಸಿಬ್ಬಂದಿಯನ್ನು ಅಮಾನತು ಮಾಡಿದ್ದಾರೆ. ಇದರಲ್ಲಿ ಆತನ ತಪ್ಪು ಏನು? ಓರ್ವ ಪೊಲೀಸ್ ಭದ್ರತೆಗೆ ನಿಯೋಜಿಸಿದರೆ ಆತ 8 ಗಂಟೆ ಕೆಲಸ ಮುಗಿಸಿ ಹೋಗುತ್ತಾನೆ. ಆಮೇಲೆ ಏನು ಮಾಡುವುದು? ನನಗೆ ಬೆದರಿಕೆ ಇದೆ ಎಂದು ಗೃಹ ಸಚಿವರೆ ಹೇಳಿದ್ದಾರೆ. ಆದರೆ ಸೂಕ್ತ ಭದ್ರತೆ ಕೊಡುವಲ್ಲಿ ವಿಫಲರಾಗಿದ್ದಾರೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ನಾನು ಶಾಸಕನಾಗಿ ಯಾವತ್ತು ಗನ್ ಮನ್ ಇಟ್ಟುಕೊಂಡಿಲ್ಲ. ಈಗ ಓರ್ವ ಸಿಬ್ಬಂದಿಯನ್ನು ದಿನದ 8 ಗಂಟೆಯ ಕಾಲ ಜೊತೆಗಿಟ್ಟುಕೊಂಡು ಅವನಿಗೆ ನಾನು ತೊಂದರೆ ನೀಡುವುದಿಲ್ಲ. ಕಾಟಾಚಾರದ ಭದ್ರತೆ ನನಗೆ ಬೇಕಿಲ್ಲ. ಕಲ್ಪಿಸಿದರೆ ಸರಿಯಾದ ಭದ್ರತೆ ನೀಡಲಿ ಎಂದು ಹೇಳಿ ಸರ್ಕಾರದ ವಿರುದ್ಧ ಖಾದರ್ ಹರಿಹಾಯ್ದಿದ್ದಾರೆ.