ಮಂಗಳೂರು: ಸಿಎಎ ಪರ ಮಂಗಳೂರಿನಲ್ಲಿ ನಡೆದ ಜನಜಾಗೃತಿ ಸಮಾವೇಶದಲ್ಲಿ ಮಾಜಿ ಸಚಿವ ಯು.ಟಿ ಖಾದರ್ ವಿರುದ್ಧ ಕೊಲೆ ಬೆದರಿಕೆ ಘೋಷಣೆ ಬಗ್ಗೆ ಯು.ಟಿ ಖಾದರ್ ಪ್ರತಿಕ್ರಿಯೆ ನೀಡಿದ್ದು, ಘೋಷಣೆ ಕೂಗಿದವರ ಬಗ್ಗೆ ಕನಿಕರ ಇದೆ ಎಂದಿದ್ದಾರೆ.
ಅವರ ವಿರುದ್ಧವಾಗಿ ಯಾವುದೇ ಕೇಸ್ ನೀಡುವುದಿಲ್ಲ. ಕೊಲೆ ಬೆದರಿಕೆಯ ಘೋಷಣೆ ಕೂಗಿದವರು ಯಾರೂ ಜಿಲ್ಲೆಯವರಲ್ಲ. ಎಲ್ಲರೂ ಹೊರಗಿನಿಂದ ಬಂದರವರು. ಅವರೆಲ್ಲಾ ಮಲಯಾಳಂ ಮಾತನಾಡುತ್ತಿದ್ದರು. ಅವರನ್ನು ಜೈಲಿಗೆ ಕಳುಹಿಸೋದು ದೊಡ್ಡ ವಿಷಯವೇನಲ್ಲ. ಆದರೆ ಅವರ ಮನೆಯವರ ಪರಿಸ್ಥಿತಿ ಬಗ್ಗೆ ಆಲೋಚನೆ ಮಾಡಿ ದೂರು ನೀಡೋ ವಿಷಯಕ್ಕೆ ಹೋಗೋದಿಲ್ಲ ಎಂದು ಯುಟಿ ಖಾದರ್ ಹೇಳಿದ್ದಾರೆ.
ಇದೇ ವೇಳೆ ಸಿಎಎ ಸಮಾವೇಶದ ಬಗ್ಗೆ ಟೀಕಿಸಿದ ಖಾದರ್, ಸಮಾವೇಶದಲ್ಲಿ ಯಾರ ಕೈಯಲ್ಲೂ ರಾಷ್ಟ್ರಧ್ವಜ ಇರಲಿಲ್ಲ. ಸಮಾವೇಶ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿಲ್ಲ ಎಂದು ಹೇಳಿದ್ದಾರೆ.
ನಡೆದಿದ್ದೇನು?
ಮಂಗಳೂರಿನ ಕೂಳೂರು ಗೋಲ್ಡ್ ಫಿಂಚ್ ಸಿಟಿಯ ಮೈದಾನದಲ್ಲಿ ಸೋಮವಾರ ನಡೆದ ಸಿಎಎ ಪರ ಜನಜಾಗೃತಿ ಸಭೆಗೆ ಲಕ್ಷಾಂತರ ಮಂದಿ ಭಾಗವಹಿಸಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತರ ಯುವಕರ ಗುಂಪೊಂದು ಘೋಷಣೆ ಕೂಗುತ್ತಿದ್ದು, ಖಾದರ್ ವಿರುದ್ಧ ಕೊಲೆ ಬೆದರಿಕೆ ಹಾಕಿದ್ದಾರೆ. ಮಲಯಾಳಂ ಭಾಷೆಯಲ್ಲಿ ‘ನಾಯಿಯ ಮಗ ಖಾದರ್, ನಮ್ಮ ಸುದ್ದಿಗೆ ಬರಬೇಡ’. ‘ನಮ್ಮ ಸುದ್ದಿಗೆ ಬಂದರೆ, ಕೈ ಕಾಲು ಎರಡೂ ಕಟ್’. ‘ಬೇಕಾಗಿದ್ದಲ್ಲಿ ತಲೆಯನ್ನೂ ಕಡಿಯುವೆವು’ ಈ ರೀತಿ ಬೆದರಿಕೆ ಹಾಕುವ ಘೋಷಣೆ ಹಾಕಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ವೈರಲ್ ಆಗಿದೆ.