ಮಂಗಳೂರು: ರಾಜ್ಯದ ಕರಾವಳಿ ಭಾಗ ಬಿಜೆಪಿಯ ಭದ್ರಕೋಟೆ. ಆದರೆ ಈ ಬಾರಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕೇಸರಿ ಅಭ್ಯರ್ಥಿಗಳ ವಿರುದ್ಧ ಅಸಮಾಧಾನ ಹೊಗೆಯಾಡುತ್ತಿದೆ. 2 ಕ್ಷೇತ್ರಗಳಲ್ಲಿ ಹಾಲಿ ಸಂಸದರೇ ಕಣಕ್ಕಿಳಿದ ಪರಿಣಾಮ ಅನಿವಾರ್ಯವಾಗಿ ಮೋದಿ ನೋಡಿ ವೋಟು ಕೋಡಿ ಅನ್ನೋ ಪ್ರಚಾರ ನಡೆಯುತ್ತಿದೆ. ಇತ್ತ ಉತ್ತರ ಕನ್ನಡ ಜಿಲ್ಲೆಯಲ್ಲೂ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಧ್ವನಿ ಕೇಳಿ ಬರುತ್ತಿದೆ.
ಹೌದು. ರಾಜ್ಯದ ಮಟ್ಟಿಗೆ ಕರಾವಳಿ ಪ್ರದೇಶ ಹೆಚ್ಚು ಕಡಿಮೆ ಕೇಸರಿ ಫೇವರ್ ಬೆಲ್ಟ್. ಇಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲುವಿನ ಕುದುರೆಗಳು. ಹೀಗಾಗಿ ಬಿಜೆಪಿ ಈ ಬಾರಿಯೂ ಅದೇ ರೀತಿಯ ಫಲಿತಾಂಶ ದಕ್ಕಿಸಿಕೊಳ್ಳುವ ಭರವಸೆಯಲ್ಲಿದೆ. ಆದರೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸದ್ಯದ ಸ್ಥಿತಿಗತಿ ನೋಡಿದರೆ ಬಿಜೆಪಿಗೆ ವರವಾಗುವ ಲಕ್ಷಣ ಕಾಣುತ್ತಿಲ್ಲ. ದಕ್ಷಿಣ ಕನ್ನಡದಲ್ಲಿ ನಳಿನ್ ಕುಮಾರ್ ಕಟೀಲ್ ಮತ್ತು ಉಡುಪಿ- ಚಿಕ್ಕಮಗಳೂರಿನಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದೆ.
Advertisement
Advertisement
ಮಿಥುನ್ ರೈಗೆ ವರವಾಗುತ್ತಾ?
ದಕ್ಷಿಣ ಕನ್ನಡ ಜಿಲ್ಲೆಯಲ್ಲಂತೂ ಹಾಲಿ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಬಿಜೆಪಿ ಕಾರ್ಯಕರ್ತರೇ ಸಿಡಿದೆದ್ದಿದ್ದಾರೆ. ಅಲ್ಲದೆ ಸಂಘ ಪರಿವಾರದ ಹಲವು ನಾಯಕರು ನಳಿನ್ ಗೆ ಈ ಬಾರಿ ಟಿಕೆಟ್ ನೀಡಬಾರದೆಂದು ಹೇಳಿದ್ದರು. ಆದರೂ ಟಿಕೆಟ್ ಗಿಟ್ಟಿಸಿಕೊಂಡಿರುವ ನಳಿನ್ ಕುಮಾರ್ ಕಟೀಲ್ ಗೆಲುವಿಗಾಗಿ ತಿಣುಕಾಡಬೇಕಾದ ಪರಿಸ್ಥಿತಿ ಎದುರಾಗಿದೆ. ವಿಶೇಷವಾಗಿ ಸಂಸದರ ಅಸಮರ್ಥನೆ ವಿರುದ್ಧ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆ ನಡೆದಿದೆ. ಹೀಗಾಗಿ ಕಾಂಗ್ರೆಸ್‍ನಿಂದ ಕಣಕ್ಕಿಳಿದಿರೋ ಮಿಥುನ್ ರೈಗೆ ಕೊಂಚ ವರವಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕರಾವಳಿ ಭಾಗದಲ್ಲಿ ಕೇಳಿಬರುತ್ತಿದೆ.
Advertisement
Advertisement
ಮೋದಿಗಾಗಿ ವೋಟು ಕೊಡಿ!
ಈ ಅಸಮಾಧಾನದ ಬೆಂಕಿ ಕಿಡಿಯನ್ನು ಆರಿಸಲು ಮೋದಿ ಮೊದಿಯೆಂಬ ಕೂಗು ಕೇಳಿ ಬರುತ್ತಿದೆ. ವ್ಯಕ್ತಿಗಿಂತ ದೇಶ ಮೊದಲು ಎನ್ನುತ್ತಲೇ ಪಕ್ಷ ಕಟ್ಟಿದ್ದ ಬಿಜೆಪಿ ಈಗ ಮೋದಿಯ ಹೆಸರನ್ನೇ ಜಪ ಮಾಡತೊಡಗಿದೆ. ಎಲ್ಲಿ ಅಭ್ಯರ್ಥಿ ದುರ್ಬಲವಾಗಿದ್ದಾರೆಯೋ ಅಲ್ಲೆಲ್ಲಾ ಈ ಜಪವೇ ಮಂತ್ರವಾಗಿಬಿಟ್ಟಿದೆ.
ಇತ್ತ ಉಡುಪಿಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಶೋಭಾ ಕರಂದ್ಲಾಜೆ ವಿರುದ್ಧ ಅಸಮಾಧಾನ ಸ್ವಲ್ಪ ಜೋರಾಗಿಯೇ ಇದೆ. ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿ ಹೊಂದಿರೋ ಕ್ಷೇತ್ರದಲ್ಲಿ ಶೋಭಾಗೆ ಟಿಕೆಟ್ ನೀಡದಂತೆ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ನಡೆದಿತ್ತು. ಆದರೆ ಸದ್ಯ ಅದು ಸೈಲೆಂಟ್ ಆಗಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನ ಕರೆದುಕೊಂಡು ಬಂದು ನಾಮಪತ್ರ ಸಲ್ಲಿಸಿರುವ ಶೋಭಾಗೆ ಈ ಬಾರಿ ಜಯ ಸುಲಭ ಆಗಿಲ್ಲ ಅನ್ನೋದು ಮನದಟ್ಟಾಗಿದೆ. ದೋಸ್ತಿ ಅಭ್ಯರ್ಥಿಯಾಗಿರೋ ಪ್ರಮೋದ್ ಮಧ್ವರಾಜ್ ಮೊಗವೀರ ಸಮುದಾಯದ ಮತಗಳನ್ನ ಸುಲಭವಾಗಿ ಸೆಳೆಯೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಉತ್ತರ ಕನ್ನಡದಲ್ಲೂ ಬಿರುಕು..!
ಉತ್ತರ ಕನ್ನಡ ಜಿಲ್ಲೆಯಲ್ಲಿ ಮೇಲ್ನೋಟಕ್ಕೆ ಬಿಜೆಪಿಗೆ ಉತ್ತಮ ಸ್ಥಿತಿ ಇರುವಂತೆ ಕಾಣುತ್ತಿದ್ದರೂ ಒಳಗೊಳಗೆ ಬೇಗುದಿ ಇದೆ. 6ನೇ ಬಾರಿ ಮರು ಆಯ್ಕೆ ಬಯಸಿ ಸ್ಪರ್ಧೆಗೆ ನಿಂತಿರೋ ಹೆಗ್ಡೆಗೆ ಕೆಲವು ಸ್ವಪಕ್ಷೀಯರದ್ದೇ ಭೀತಿ ಕಾಡುತ್ತಿದೆ. ಆದರೆ ಜೆಡಿಎಸ್ ನಿಂದ ಸ್ಪರ್ಧಿಸಿರೋ ಆನಂದ್ ಅಸ್ನೋಟಿಕರ್ ಬಗ್ಗೆ ಕ್ಷೇತ್ರದಲ್ಲಿ ಅಷ್ಟಾಗಿ ಪರಿಚಯವಿಲ್ಲ. ಹೀಗಾಗಿ ಇದು ಅನಂತ್ ಕುಮಾರ್ ಗೆ ಪ್ಲಸ್ ಪಾಯಿಂಟ್ ಆಗಿದೆ. ಒಟ್ಟಿನಲ್ಲಿ ಕರಾವಳಿ ಪ್ರದೇಶದಲ್ಲಿ ಈ ಬಾರಿ ಬಿಜೆಪಿಗೆ ಗೆಲುವು ಮಾತ್ರ ಸುಲಭವಾಗಿಲ್ಲ ಎಂದು ಜನಸಾಮಾನ್ಯರು ಮಾತನಾಡಿಕೊಳ್ಳುತ್ತಿದ್ದಾರೆ.