ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಕಳ್ಳನೊಬ್ಬ ಮನೆಗೆ ನುಗ್ಗಿ ಅಲ್ಲಿಯೇ ಮಲಗಿ ನಿದ್ರಿಸಿದ್ದು ಚರ್ಚೆಗೆ ಗ್ರಾಸವಾಗಿದೆ. ಬಿಹಾರ ಮೂಲದ ಕಳ್ಳ ಅನಿಲ್ ಸಹಾನಿ, ಕಪಾಟಿನ ಬೀಗದ ಕೈಯನ್ನು ತೆಗೆದುಕೊಂಡಿದ್ದರೂ ಕಳ್ಳತನ ಮಾಡದೇ, ಅದೇ ಮನೆಯ ಸೋಫಾದಲ್ಲಿ ಮಲಗಿದ್ದನು. ಇದಕ್ಕೆ ಕಾರಣ ಆ ಮನೆಯಲ್ಲಿದ್ದ ದೈವದ ಶಕ್ತಿ ಎಂಬ ಮಾತುಗಳು ಕೇಳಿಬಂದಿದೆ.
ಕಳ್ಳ ಕಪಾಟಿನಲ್ಲಿದ್ದ ಚಿನ್ನದ ಒಡವೆಗಳನ್ನು ಕದ್ದು ನಿರಾಯಾಸವಾಗಿ ಪರಾರಿ ಆಗಬಹುದಿತ್ತು. ಆದರೆ ಬೀಗದ ಕೈಯನ್ನು ಜೊತೆಗಿರಿಸಿಕೊಂಡೇ ಮಲಗಿದ್ದಲ್ಲದೆ, ಬೆಳಗ್ಗೆವರೆಗೂ ನಿದ್ರಿಸಿ ಮನೆ ಮಾಲೀಕನ ಕೈಗೆ ಸಿಕ್ಕಿಬಿದ್ದಿದ್ದ. ಹೀಗೆ ಕಳ್ಳತನಕ್ಕೆಂದು ಬಂದು ಕಳ್ಳ ಮನೆಯಲ್ಲೇ ಮಲಗಿ ನಿದ್ದೆಗೆ ಜಾರಲು ಮನೆಯಲ್ಲಿದ್ದ ದೈವ ಶಕ್ತಿಯೇ ಕಾರಣ ಎನ್ನಲಾಗುತ್ತಿದೆ.
Advertisement
Advertisement
ಮನೆಯ ಮಾಲೀಕ ಸುದರ್ಶನ್ ಪೂರ್ವಜರ ಕಾಲದಿಂದಲೂ ಮನೆಯಲ್ಲಿ ಕಲ್ಲುರ್ಟಿ ಮತ್ತು ಗುಳಿಗ ದೈವದ ಆರಾಧನೆ ಮಾಡುತ್ತಾ ಬಂದಿದ್ದರು. ಇದೇ ದೈವದ ಶಕ್ತಿ ಕಳ್ಳನನ್ನು ತಡೆದಿದ್ದು, ಆತ ಮನೆಯಲ್ಲೇ ಮಲಗಿ ಸಿಕ್ಕಿಬೀಳುವಂತೆ ಮಾಡಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
Advertisement
ಈ ಬಿಹಾರದ ಕಳ್ಳ ಸಿಕ್ಕಿಬೀಳುವ ಹತ್ತು ದಿನಗಳ ಹಿಂದೆ ಇದೇ ರೀತಿಯ ಘಟನೆ ನಡೆದಿತ್ತು. ಮನೆಯ ಹೊರಗಿನ ದೈವದ ಗುಡಿಗೆ ನುಗ್ಗಿದ ಕಳ್ಳನೊಬ್ಬ ಕಾಣಿಗೆ ಡಬ್ಬಿ ಎಗರಿಸಲು ಯತ್ನಿಸಿದ್ದ. ಆದರೆ ಗುಡಿಗೆ ನುಗ್ಗಿದ್ದ ಕಳ್ಳ ಹೊರಗೆ ಬರಲಾಗದೇ ಸಿಕ್ಕಿಬಿದ್ದಿದ್ದ. ಇದು ಕೂಡ ದೈವದ ಪವಾಡ ಎನ್ನುವ ಮಾತು ಕೇಳಿಬಂದಿತ್ತು. ಅಂದು ಕೂಡ ಕಳ್ಳನನ್ನು ಮನೆಯವರೇ ಹಿಡಿದು ಉಪ್ಪಿನಂಗಡಿ ಪೊಲೀಸರಿಗೆ ಒಪ್ಪಿಸಿದ್ದರು.
Advertisement
ಈಗ ಮತ್ತೊಬ್ಬ ಕಳ್ಳ ಮನೆಗೆ ನುಗ್ಗಿ ಮನೆಯಲ್ಲೇ ನಿದ್ರಿಸಿ ಸಿಕ್ಕಿಬಿದ್ದಿದ್ದಾನೆ. ಮನೆಯ ಹಂಚು ತೆಗೆದು ಒಳನುಗ್ಗಿ, ಬೀಗದ ಕೈಯನ್ನು ಎಗರಿಸಿದ್ದರೂ ಕಳವು ಮಾಡದೇ ಸುಮ್ಮನೆ ಮಲಗಿದ್ದು ದೈವಿ ಶಕ್ತಿಯ ಪವಾಡ ಎನ್ನುವ ಮಾತು ಕೇಳಿಬಂದಿದೆ. ಮನೆಯ ಯಜಮಾನ ಸುದರ್ಶನ್ ಕೂಡ ಇದೇ ಮಾತನ್ನು ಹೇಳುತ್ತಿದ್ದಾರೆ.