Dakshina Kannada
‘ಆತ್ಮಹತ್ಯೆ ಮಾಡಬೇಡಿ ಪ್ಲೀಸ್’: ವಿದ್ಯಾರ್ಥಿಗಳಿಂದ ವಿಭಿನ್ನ ಅಭಿಯಾನ

ಮಂಗಳೂರು: ಆತ್ಮಹತ್ಯೆ ಮಹಾಪಾಪ, ವರ್ಷಕ್ಕೆ ಸಾವಿರಾರು ಮಂದಿ ಆತ್ಮಹತ್ಯೆ ಮಾಡಿಕೊಂಡು ತಮ್ಮ ಜೀವನಕ್ಕೆ ಅಂತ್ಯ ಹಾಡುತ್ತಾರೆ. ಅದರಲ್ಲಿ ಯುವಜನತೆಯ ಸಂಖ್ಯೆಯೇ ಹೆಚ್ಚು. ಮನೆಗೆ ಆಧಾರಸ್ತಂಭವಾಗಿರುವರು ಆತ್ಮಹತ್ಯೆ ಮಾಡಿಕೊಂಡರೇ ಇಡೀ ಕುಟುಂಬದ ಸಂಕಷ್ಟ ಎದುರಿಸುವಂತಾಗುತ್ತದೆ.
ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಗಟ್ಟಲು ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ವತಿಯಿಂದ ನಗರದ ರೊಸಾರಿಯಾ ಶಿಕ್ಷಣ ಸಮೂಹದ ಹಾಗೂ ಸೈಂಟ್ ಆ್ಯನ್ಸ್ ಶಿಕ್ಷಣ ಸಮೂಹದ ವಿದ್ಯಾರ್ಥಿಗಳು ‘ಆತ್ಮಹತ್ಯೆ ತಡೆ ಅಭಿಯಾನ’ ನಡೆಸಿದ್ದರು.
ನನ್ನ ಜೀವ ನನ್ನ ಆತ್ಮ ಉಳಿಸಿಕೊಳ್ಳುವುದು ನನ್ನ ಕರ್ತವ್ಯ, ಇತರರ ಜೀವ ಉಳಿಸುವುದು ಪುಣ್ಯದ ಕೆಲಸ ಎಂಬ ಧ್ಯೇಯ ವಾಕ್ಯವನ್ನು ಇಟ್ಟುಕೊಂಡು ಆತ್ಮಹತ್ಯೆ ಅಭಿಯಾನದ ಭಾಗವಹಿಸುವ ಎಲ್ಲರೂ ಹಳದಿ ರಿಬ್ಬನ್‍ನನ್ನು ಶಾಲೆ ಕಚೇರಿ ಮಾರ್ಕೆಟ್ ಮತ್ತಿತರ ಎಲ್ಲ ಸ್ಥಳಗಳಿಗೆ ಹೋಗುವಾಗ ತಮ್ಮ ಬಟ್ಟೆಯ ಮೇಲೆ ಧರಿಸಿ, ಆತ್ಮಹತ್ಯೆ ಮಾಡದಂತೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಿದ್ದಾರೆ.
ಮಾರ್ಚ್ ತಿಂಗಳ ಆರಂಭದಿಂದ ಕೊನೆಯ ತನಕ ಆತ್ಮಹತ್ಯೆ ಎನ್ನುವುದು ದೊಡ್ಡ ತಪ್ಪು, ಇಂತಹ ಕೆಲಸಕ್ಕೆ ಯಾರು ಮುಂದಾಗುವುದು ಬೇಡ ಹಾಗೂ ಇಂತಹ ಆಲೋಚನೆ ಮಾಡುವವರಿಗೆ ಜಾಗೃತಿ ಮೂಡಿಸಿ ಧೈರ್ಯ ತುಂಬುವ ಕೆಲಸ ಆಗಬೇಕು ಎನ್ನುವ ನಿಟ್ಟಿನಲ್ಲಿ 50ಕ್ಕೂ ಅಧಿಕ ಮಂದಿಯ ಸಮಿತಿ ರಚನೆ ಮಾಡಿದ್ದು, ಅವರು ಈಗಾಗಲೇ ಬೇರೆ ಬೇರೆ ಸ್ಥಳಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸಿ ಧೈರ್ಯ ತುಂಬುವ ಕೆಲಸದಲ್ಲಿ ನಿರತರಾಗಿದ್ದಾರೆ.
