ಮಂಗಳೂರು: ರಾಮ್ ಸೇನಾ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಮಸಾಜ್ ಸೆಂಟರ್‌ಗೆ ದಾಳಿ ನಡೆಸಿದ್ದಾರೆ. ಯುವತಿಯರು ಇದ್ದ ಸಂದರ್ಭದಲ್ಲೇ ದಾಳಿ ನಡೆಸಿ ಮಸಾಜ್ ಸೆಂಟರ್‌ನ್ನು ಸಂಪೂರ್ಣ ಧ್ವಂಸ ಮಾಡಿದ್ದಾರೆ. ಸಂಘಟನೆಯ ಸಂಸ್ಥಾಪಕ ಪ್ರಸಾದ್ ಅತ್ತಾವರ ಸೇರಿ ಒಟ್ಟು 14 ಮಂದಿಯ ಬಂಧನವಾಗಿದೆ.
ಮಂಗಳೂರಿನ ಬಿಜೈ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯ ಕಟ್ಟಡದ ಮೂರನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿದ್ದ ಕಲರ್ಸ್ ಯೂನಿಸೆಕ್ಸ್ ಸೆಲೂ ಮೇಲೆ ದಾಳಿ ನಡೆದಿದೆ. ರಾಮ್ ಸೇನಾ ಕರ್ನಾಟಕದ ಸಂಸ್ಥಾಪಕ ಪ್ರಸಾದ್ ಅತ್ತಾವರ ಸೂಚನೆಯಂತೆ 13 ಮಂದಿ ಕಾರ್ಯಕರ್ತರು ಮಧ್ಯಾಹ್ನ ಸೆಲೂನ್‌ಗೆ ನುಗ್ಗಿ ದಾಳಿ ನಡೆಸಿದ್ದಾರೆ. ಸೆಲೂನ್‌ನಲ್ಲಿ ಮೂವರು ಯುವತಿಯರು, ಓರ್ವ ಯುವಕ ಸಿಬ್ಬಂದಿಗಳಿದ್ದು ಅವರ ಮುಂದೆಯೇ ಸೆಲೂನ್‌ನ ಪೀಠೋಪಕರಣ ಗಾಜು ಪುಡಿಗೈದು ಕ್ರೌರ್ಯ ಮೆರೆದಿದ್ದಾರೆ. ಇದು ಹೆಸರಿಗೆ ಮಾತ್ರ ಸೆಲೂನ್ ಎಂದಿದ್ದರೂ ಅದರ ಒಳಗೆ ಮಾತ್ರ ನಡೆಯುತ್ತಿದ್ದದ್ದು ಮಸಾಜ್ ಮಾತ್ರವಲ್ಲ, ಅದರ ನೆಪದಲ್ಲಿ ಅನೈತಿಕ ದಂಧೆ ನಡೆಯುತ್ತಿತ್ತು ಎನ್ನುವುದು ಸಂಘಟನೆಯ ಕಾರ್ಯಕರ್ತರ ಆರೋಪ. ಇದಕ್ಕೆ ಪುಷ್ಟಿ ನೀಡುವ ಹಾಗೆ ದಾಳಿ ವೇಳೆ ಸೆಲೂನ್ ಒಳಗೆ ಕಾಂಡೋಮ್ ಪತ್ತೆಯಾಗಿದೆ. ಇಂತಹ ಮಸಾಜ್ ಸೆಂಟರ್‌ಗಳಲ್ಲಿ 16 ವರ್ಷದ ಬಾಲಕಿಯರನ್ನೂ ವೇಶ್ಯಾವಾಟಿಕೆಗೆ ಬಳಸುತ್ತಿದ್ದಾರೆ ಎಂದು ರಾಮ್ ಸೇನಾ ಕರ್ನಾಟಕದ ಸಂಸ್ಥಾಪಕ ಆರೋಪಿಸಿದ್ದಾರೆ.
Advertisement
ದಾಳಿ ನಡೆಸಿದ ಬಳಿಕ ರಾಮ್ ಸೇನಾ ಕರ್ನಾಟಕ ಸಂಸ್ಥಾಪಕ ಪ್ರಸಾದ್ ಅತ್ತಾವರ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿ ದಾಳಿಯನ್ನ ಸಮರ್ಥಿಸಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಮಂಗಳೂರು ಹೊರವಲಯದ ಕುಡುಪು ಎಂಬಲ್ಲಿರುವ ಆತನ ಮನೆಯಿಂದ ಮಾಧ್ಯಮದ ಎದುರೇ ಪೊಲೀಸರು ಎಳೆದುಕೊಂಡು ಹೋಗಿ ಬಂಧಿಸಿದ್ದರು. ಬಳಿಕ ಎಫ್‌ಐಆರ್ ದಾಖಲಿಸಿದ ಬರ್ಕೆ ಪೊಲೀಸರು ತಲೆಮರೆಸಿಕೊಂಡಿದ್ದ ಸಂಘಟನೆಯ ಕಾರ್ಯಕರ್ತರನ್ನು ಬಂಧಿಸಿದ್ದರು. ರಾಮ್ ಸೇನಾ ಕರ್ನಾಟಕದ ಕಾರ್ಯಕರ್ತರಾದ ಹರ್ಷ ರಾಜ್, ಮೋಹನ್ ದಾಸ್, ಪುರಂದರ, ಸಚಿನ್,ರವೀಶ್, ಸುಕೇಶ, ಅಂಕಿತ್, ಕಾಳಿ ಮುತ್ತು, ಅಭಿಲಾಷ್, ದೀಪಕ್, ವಿಘ್ನೇಶ್, ಶರಣ್ ರಾಜ್, ಪ್ರದೀಪ್ ಪೂಜಾರಿ, ಪ್ರಸಾದ್ ಅತ್ತಾವರ ಸೇರಿ ಒಟ್ಟು 14 ಮಂದಿಯನ್ನ ಬಂಧಿಸಿದ್ದಾರೆ. BNS ಆಕ್ಟ್ 329(2), 324(5), 74, 351(3), 115(2), 109, 352, 190 ಅಡಿ ಪ್ರಕರಣ ದಾಖಲಾಗಿದೆ.