– ಶಬರಿಮಲೆಯಿಂದ ಗ್ರಾಮಕ್ಕೆ ಮರಳಿ ತಿರುಪತಿಗೆ ತೆರಳಿದ್ದ ಯಾತ್ರಾರ್ಥಿಗಳು
– ಆರು ಜನರಿಗೆ ಗಂಭೀರ ಗಾಯ
ರಾಮನಗರ: ಯಾತ್ರಾರ್ಥಿಗಳಿದ್ದ ಝೈಲೋ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದು, ಆರು ಜನರು ಗಂಭೀರವಾಗಿ ಗಾಯಗೊಂಡ ಘಟನೆ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಸಮೀಪದಲ್ಲಿ ನಡೆದಿದೆ.
ಮಂಗಳೂರು ಸಮೀಪದ ಕಾಸರಗೋಡು ಹಾಗೂ ಅಂಕಿ ಮೂಲದ ಝೈಲೋ ಕಾರಿನ ಮಾಲೀಕ ಹಾಗೂ ಚಾಲಕ ಕಿಶನ್, ಮೋನಪ್ಪ ಹಾಗೂ ಅಕ್ಷಯ್ ಸಾವನ್ನಪ್ಪಿದ ದುರ್ದೈವಿಗಳು. ಬಾಲಕೃಷ್ಣ ಯಾನೆ ತಮ್ಮು, ರಾಘವೇಂದ್ರ, ಮಹಾಬಲ, ಪುಷ್ಪರಾಜ್, ಜಗದೀಶ್ ಹಾಗೂ ಶೇಖರ್ ಗಂಭೀರ ಗಾಯಗೊಂಡಿದ್ದು, ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಬರಿಮಲೆ ಯಾತ್ರೆ ಮುಗಿಸಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಮನೆಗೆ ವಾಪಸಾಗುತ್ತಿದ್ದ ಘಟನೆ ಸಂಭವಿಸಿದೆ.
Advertisement
Advertisement
ಅಪಘಾತದಲ್ಲಿ ಸಾವನ್ನಪ್ಪಿದ ಕಿಶನ್, ಮೋನಪ್ಪ ಹಾಗೂ ಶೇಖರ್ ಶಬರಿಮಲೆ ಮಾಲಾಧಾರಿಗಳಾಗಿರಲಿಲ್ಲ. ಮಿಕ್ಕ ಎಲ್ಲರೂ ಶಬರಿಮಲೆಯಿಂದ ಕಾಸರಗೋಡು ಸಮೀಪದ ತಮ್ಮ ಗ್ರಾಮ ಹೊಸಂಗಡಿಗೆ ಮಂಗಳವಾರ ಮರಳಿದ್ದರು. ಅಂದು ಬೆಳಗ್ಗೆ 11 ಗಂಟೆಗೆ ತಮ್ಮ ಮನೆಗೆ ತೆರಳಿ, ಬಳಿಕ ಸಂಜೆ 5.00 ಗಂಟೆಗೆ ಹೊಸಂಗಡಿಯಿಂದ ತಿರುಪತಿಗೆ ಒಂಬತ್ತು ಮಂದಿ ಯಾತ್ರಾರ್ಥಿಗಳು ಹೊರಟಿದ್ದರು.
Advertisement
ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆದು ಮತ್ತೆ ವಾಪಸ್ ಆಗುತ್ತಿದ್ದಾಗ ಗುಡೇಮಾರನಹಳ್ಳಿ ಸಮೀಪದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮೂರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆರು ಜನರು ಗಂಭೀರಗಾಯಗೊಂಡಿದ್ದಾರೆ. ಇದನ್ನು ನೋಡಿದ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
Advertisement
ಮೃತ ಅಕ್ಷಯ್ ಅವಿವಾಹಿತರಾಗಿದ್ದು, ಕಿಶನ್ ಹಾಗೂ ಮೋನಪ್ಪ ವಿವಾಹಿತರು. ಮೋನಪ್ಪ ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ. ನಿದ್ದೆಯ ಮಂಪರಿನಲ್ಲಿದ್ದ ಕಾರು ಚಾಲಕ ಕಿಶನ್ ಹೆದ್ದಾರಿಯಲ್ಲಿನ ಡಿವೈಡರ್ ಗೆ ಮೊದಲು ಡಿಕ್ಕಿ ಹೊಡೆದು ಬಳಿಕ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದಿದ್ದಾನೆ. ಈ ಸಂಬಂಧ ಸ್ಥಳಕ್ಕೆ ಕುದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.