ಸುಳ್ಳು ವದಂತಿ ನಂಬಿ ಮಂಗ್ಳೂರು ರೈಲ್ವೇ ನಿಲ್ದಾಣಕ್ಕೆ ಬಂದ ಕಾರ್ಮಿಕರು

Public TV
1 Min Read
mng

– ನಾವ್ ಊರಿಗೆ ಹೋಗ್ಬೇಕು: ವಲಸಿಗರಿಂದ ಪ್ರತಿಭಟನೆ

ಮಂಗಳೂರು: ಮಂಗಳೂರಿನಿಂದ ಉತ್ತರ ಭಾರತ ರಾಜ್ಯಗಳಿಗೆ ರೈಲಿನ ವ್ಯವಸ್ಥೆ ಮಾಡಲಾಗಿದೆ ಅಂತ ವದಂತಿ ಹಬ್ಬಿ ಸಾವಿರಾರು ವಲಸೆ ಕಾರ್ಮಿಕರು ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣ ಬಳಿ ಗುಂಪು ಸೇರಿ, ಪ್ರತಿಭಟನೆ ನಡೆಸಿ ಆತಂಕ ಸೃಷ್ಟಿಸಿದ ಘಟನೆ ನಡೆಯಿತು.

ಉತ್ತರ ಭಾರತದ ವಲಸೆ ಕಾರ್ಮಿಕರು ರೈಲು ಮೂಲಕ ತಮ್ಮನ್ನು ಊರಿಗೆ ಕಳುಹಿಸುತ್ತಾರೆ ಎಂಬ ವದಂತಿ ನಂಬಿ ಬೆಳಗ್ಗೆನಿಂದಲೇ ರೈಲು ನಿಲ್ದಾಣದಲ್ಲಿ ಸೇರಿದ್ದರು. ಆದರೆ ರೈಲೇ ಸಿಬ್ಬಂದಿ ಯಾವುದೇ ರೈಲ್ವೇ ವ್ಯವಸ್ಥೆ ಮಾಡಿಲ್ಲ ಎಂದು ಹೇಳಿ ಸೇರಿದ ವಲಸೆ ಕಾರ್ಮಿಕರನ್ನು ಅಲ್ಲಿಂದ ತೆರಳುವಂತೆ ಸೂಚಿಸಿದ್ದರು. ಆದರೆ ವಲಸೆ ಕಾರ್ಮಿಕರು ಮಾತ್ರ ಪಟ್ಟು ಬಿಡದೇ ರೈಲು ವ್ಯವಸ್ಥೆ ಕಲ್ಪಿಸುವಂತೆ ಪೋಸ್ಟರ್ ಹಿಡಿದು ಪ್ರತಿಭಟನೆ ನಡೆಸಿದರು.

mng 2

ಈ ವೇಳೆ ಸ್ಥಳದಿಂದ ಹೋಗುವಂತೆ ಪೊಲೀಸರು ಮನವೊಲಿಕೆಗೆ ಪ್ರಯತ್ನಪಟ್ಟರೂ ಕಾರ್ಮಿಕರು ಪೊಲೀಸರ ಮಾತನ್ನು ಕೇಳದೆ, ಉಪವಾಸವಿದ್ದರೂ ಪರವಾಗಿಲ್ಲ ನಾವು ಜಾಗ ಬಿಟ್ಟು ಕದಲಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆ ಮುಂದುವರಿಸಿದರು. ಈ ವೇಳೆ ಪೊಲೀಸರ ಜೊತೆ ವಾಗ್ವಾದ ನಡೆಸಿ ಕೈ ಕೈ ಮಿಲಾಯಿಸುವ ಹಂತ ತಲುಪಿ ಕೆಲ ಹೊತ್ತು ಆತಂಕ ಸೃಷ್ಟಿಯಾಯಿತು.

mng 3

ನಂತರ ಸ್ಥಳಕ್ಕೆ ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ಭೇಟಿ ನೀಡಿ, ಮೂರು ದಿನದೊಳಗೆ ರೈಲಿನ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಇದಕ್ಕೆ ಒಪ್ಪಿದ ಉತ್ತರ ಭಾರತದ ವಲಸೆ ಕಾರ್ಮಿಕರು ಪ್ರತಿಭಟನೆ ಹಿಂದಕ್ಕೆ ತೆಗೆದುಕೊಂಡರು. ನಂತರ ಜಿಲ್ಲಾಡಳಿತದ ವತಿಯಿಂದ ಕಾರ್ಮಿಕರು ಬಂದ ಸ್ಥಳಕ್ಕೆ ಮರಳಲು ಸ್ಥಳೀಯ ಬಸ್ಸಿನ ವ್ಯವಸ್ಥೆ ಮಾಡಿಕೊಡಲಾಯಿತು.

Share This Article
Leave a Comment

Leave a Reply

Your email address will not be published. Required fields are marked *