ಗೋಡೆಗೆ ಸೆಗಣಿ ಪೇಂಟ್ – ವಿಶಿಷ್ಠ ಯೋಜನೆಗೆ ಕೈ ಹಾಕಿದ್ರು ಪುತ್ತೂರಿನ ಶಶಿಶೇಖರ ಭಟ್

Public TV
2 Min Read
MNG PUTTUR copy

ಪುತ್ತೂರು(ಮಂಗಳೂರು): ಹಿಂದಿನ ಕಾಲದಲ್ಲಿ ಹೆಚ್ಚಾಗಿ ಮಣ್ಣಿನ ಮನೆಗಳಿದ್ದುದರಿಂದ ನೆಲ, ಗೋಡೆಯ ಅರ್ಧ ಭಾಗಕ್ಕೆ ಸೆಗಣಿ ಸಾರುತ್ತಿದ್ದರು. ಆದ್ರೆ ಇದೀಗ ಸಿಮೆಂಟ್ ಬಿಲ್ಡಿಂಗ್ ಗಳು ತಲೆಯೆತ್ತುತ್ತಿದ್ದು, ಜನರು ಸೆಗಣಿ ಮುಟ್ಟುವ ಗೋಜಿಗೆ ಹೋಗಲ್ಲ. ಆದ್ರೆ ಪುತ್ತೂರಿನ ವ್ಯಕ್ತಿಯೊಬ್ಬರು ತಮ್ಮ ಮನೆಯ ಗೋಡೆಗೆ ಸೆಗಣಿ ಪೇಂಟ್ ಮಾಡುವ ಮೂಲಕ ವಿಶಿಷ್ಠ ಯೋಜನೆಗೆ ಕೈ ಹಾಕಿದ್ದಾರೆ.

ಪುತ್ತೂರು ತಾಲೂಕಿನ ಇರ್ದೆ ಗ್ರಾಮದ ಬೆಂದ್ರ್ ತೀರ್ಥ ಸಮೀಪದ ದೇವಕಾನ ನಿವಾಸಿ ಪಂಚಗವ್ಯ ಸಿದ್ದ ವೈದ್ಯ ಡಾ. ಶಶಿಶೇಖರ ಭಟ್, `ಗೋ ರಂಗ್’ ಅನ್ನೋ ಯೋಜನೆ ಆರಂಭಿಸಿದ್ದಾರೆ. ನಾಟಿ ಹಸುವಿನ ಸೆಗಣಿಯನ್ನು ಬಳಸಿ ಬಣ್ಣ ತಯಾರಿಸಿ ಮನೆಯ ಗೋಡೆಗೆ ಬಳಿಯುವ ಮೂಲಕ ಯಶಸ್ಸು ಕಂಡಿದ್ದಾರೆ.

MNG 4 copy

ಐಡಿಯಾ ಬಂದಿದ್ದು ಹೇಗೆ..?
ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಪದಾರ್ಥಗಳಿಂದ ಮಾಡಿದ ಬಣ್ಣಗಳು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದನ್ನು ಮನಗಂಡ ಅವರು ಈ ನೂತನ ಉತ್ಪನ್ನವನ್ನು ತಯಾರಿಸಲು ಮುಂದಾಗಿದ್ದು, ಯಶಸ್ವಿಯಾಗಿರುವುದಾಗಿ ಅವರು ತಿಳಿಸಿದ್ದಾರೆ.

ಕೇವಲ ಸ್ವದೇಶೀ ತಳಿಯ ಗೋವಿನ ಸೆಗಣಿಯಿಂದ ಮಾತ್ರವೇ ಈ ಸೆಗಣಿ ಪೇಂಟ್ ತಯಾರಿಸಲು ಸಾಧ್ಯ. ಈ ಮೂಲಕ ಸೆಗಣಿಯನ್ನು ಕೇವಲ ಗೋಬರ್ ಗ್ಯಾಸ್ ಹಾಗೂ ಗೊಬ್ಬರಕ್ಕೆ ಬಳಸುತ್ತಿದ್ದ ಕಾಲ ಇನ್ನು ದೂರವಾಗಲಿದ್ದು, ಸೆಗಣಿಯ ಪೇಂಟ್ ಮಾರುಕಟ್ಟೆಗೆ ಪ್ರವೇಶಿಸುವ ಸಾಧ್ಯತೆಯೂ ಹೆಚ್ಚಾಗಿದೆ.

MNG 3 copy

ಪೈಂಟ್ ತಯಾರಿಸೋದು ಹೇಗೆ..?
ಸೆಗಣಿಗೆ ಕೆಲವು ಔಷಧೀಯ ಗಿಡಮೂಲಿಕೆಗಳನ್ನು ಬಳಸಿ ಸಿಂಥೆಟಿಕ್ ಪೇಂಟ್ ನಂತೆ ಗೋಡೆಗೆ ಅಂಟಿಕೊಳ್ಳುವಂತೆ ತಯಾರಿಸಿದ್ದಾರೆ. ಬಳಿಕ ಮನೆಯ ಎಲ್ಲಾ ಕೋಣೆಗಳಿಗೂ ಬಳಿದಿದ್ದಾರೆ. ಸೆಗಣಿಯ ಈ ಪೇಂಟ್ ಅನ್ನು ಹಲವು ಬಣ್ಣದಲ್ಲೂ ಸಿದ್ಧಪಡಿಸುವ ಯೋಜನೆಯನ್ನೂ ಶಶಿಶೇಖರ್ ಅವರು ಹಾಕಿಕೊಂಡಿದ್ದಾರೆ.

ಹಿಂದಿನ ಕಾಲದಲ್ಲೂ ಸೆಗಣಿಯನ್ನು ಗೋಡೆಗಳಿಗೆ ಹಾಗೂ ನೆಲಕ್ಕೆ ಬಳಿಯುವಂತಹ ವ್ಯವಸ್ಥೆಗಳಿತ್ತು. ಆದರೆ ಈ ಆಧುನಿಕ ಯುಗದಲ್ಲಿ ರಾಸಾಯನಿಕ ಮಿಶ್ರಿತ ಪೇಂಟ್ ಗಳನ್ನು ಬಳಸಲು ಆರಂಭವಾಗಿದೆ. ಇದು ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಮನೆ ಮಂದಿಯ ಆರೋಗ್ಯದ ಮೇಲೆ ಸೆಗಣಿಯ ರೋಗ ನಿರೋಧಕ ಶಕ್ತಿಯ ಪರಿಣಾಮ ಬೀಳಲಿ ಎಂಬುದೇ ಸೆಗಣಿಯ ಪೇಂಟ್ ಮಾಡುವುದರ ಮುಖ್ಯ ಉದ್ದೇಶ ಎಂದು ಡಾ.ಶಶಿಶೇಖರ್ ಭಟ್ ಹೇಳಿದ್ದಾರೆ.

MNG 2 copy

ಬಳಕೆ ಹೇಗೆ..?
ರಾಸಾಯನಿಕ ಮಿಶ್ರಿತ ಸಿಂಥೆಟಿಕ್ ಪೇಂಟ್ ಗಳಂತೆಯೇ ಸೆಗಣಿಯ ಪೇಂಟ್ ಅನ್ನು ಬಳಸಬಹುದಾಗಿದೆ. ಸಾಮಾನ್ಯವಾಗಿ ಎಲ್ಲಾ ಪೇಂಟ್ ಗಳನ್ನು ಗೋಡೆಗೆ ಎರಡು ಬಾರಿ ಬಳಿಯುವಂತೆ ಸೆಗಣಿಯ ಪೇಂಟ್ ಅನ್ನು ಎರಡು ಬಾರಿ ಬಳಿಯಬೇಕಾಗುತ್ತದೆ. ಈ ಪೇಂಟ್ ವಾಟರ್ ಪ್ರೂಫ್ ಕೂಡಾ ಆಗಿದೆ. ಅಂಗಡಿಯಲ್ಲಿ ಸಿಗುವ ರಾಸಾಯನಿಕ ಬಣ್ಣಗಳನ್ನು ಬಳಿಯುವಾಗ ಇರುವ ಕಣ್ಣುರಿತ, ತುರಿಕೆಯ ಲಕ್ಷಣಗಳು ಸೆಗಣಿಯಿಂದ ತಯಾರಿಸಿದ ಬಣ್ಣದಲ್ಲಿ ಇಲ್ಲದ ಕಾರಣ ಪೇಂಟ್ ಮಾಡುವವರು ಕೂಡ ಇಂತಹ ಪೇಂಟ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಬೇಕು ಎನ್ನುವ ಇಚ್ಛೆಯನ್ನೂ ವ್ಯಕ್ತಪಡಿಸುತ್ತಿದ್ದಾರೆ.

MNG 5 copy

ತಾವೇ ಫಸ್ಟ್ ಟ್ರಯಲ್:
ನಾವು ವಾಸಿಸುವ ಮನೆಯನ್ನು ರಾಸಾಯನಿಕ ಬಣ್ಣಗಳಿಂದ ಮುಕ್ತಗೊಳಿಸಿ ವಿಕಿರಣ ರಹಿತ ಮಾಡುವ ನಿಟ್ಟಿನಲ್ಲಿ ಗೋ ರಂಗ್ ತಯಾರಿಸಿ ಮೊದಲು ತಮ್ಮದೇ ಮನೆಯ ಗೋಡೆಗೆ ಬಣ್ಣ ಬಳಿದಿದ್ದೇನೆ. ಇದರಲ್ಲಿ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಮನುಷ್ಯನ ಆಯುಷ್ಯ ಹಾಗೂ ಆರೋಗ್ಯವೂ ವೃದ್ಧಿಸುತ್ತದೆ. ಇದಲ್ಲದೆ ಉಷ್ಣಾಂಶ ತಡೆಯುವ ಶಕ್ತಿ ಕೂಡ ಈ ಗೋ ರಂಗ್‍ಗೆ ಇದೆ ಎಂದು ಡಾ. ಶಶಿಶೇಖರ ಭಟ್ ಹೇಳುತ್ತಾರೆ.

MNG 1 copy

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *