– ಅತೀ ಹೆಚ್ಚು ಟ್ರೋಲ್‍ಗೆ ಒಳಗಾದ ದೇಶದ No.1 ಸಂಸದ ನಳಿನ್
– ಸಾಮಾಜಿಕ ಜಾಲತಾಣಗಳಲ್ಲಿ ಕಟೀಲ್ ವಿರುದ್ಧ ಆಕ್ರೋಶ
ಮಂಗಳೂರು: ನಗರದ ಹೆಬ್ಬಾಗಿಲು ಎಂದೇ ಖ್ಯಾತಿ ಗಳಿಸಿರುವ ಪಂಪ್‍ವೆಲ್ ವೃತ್ತ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದು, ಪಂಪ್‍ವೆಲ್ ಮೇಲ್ಸೆತುವೆ ಪೂರ್ಣಗೊಳ್ಳದ್ದಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಒಂದು ವೃತ್ತದ ಸೇತುವೆ ಈ ಪರಿ ಸುದ್ದಿಯಾಗಿದ್ದು, ಅದಕ್ಕೆ ಬಲವಾದ ಕಾರಣವೂ ಇದೆ. ಮಂಗಳೂರಿನ ಪಂಪ್ ವೆಲ್ ವೃತ್ತಕ್ಕೂ ಸಂಸದ ನಳಿನ್ ಕುಮಾರ್ ಕಟೀಲ್‍ಗೂ ಗಾಢ ನಂಟಿದೆ. ಕಳೆದ ಹತ್ತು ವರ್ಷಗಳಿಂದ ಕುಂಟುತ್ತಾ ಸಾಗುತ್ತಿರುವ ಮಂಗಳೂರಿನ ಪಂಪ್ ವೆಲ್ ಮೇಲ್ಸೆತುವೆ ಕಾಮಗಾರಿ ಡಿಸೆಂಬರ್ ಕೊನೆಗೆ ಮುಗಿದು, 2020ರ ಹೊಸ ವರ್ಷಕ್ಕೆ ಉದ್ಘಾಟನೆ ಆಗುತ್ತದೆ ಎಂದು ನಳಿನ್ ಕುಮಾರ್ ಕಟೀಲ್ ಭರವಸೆ ನೀಡಿದ್ದರು. ಆದರೆ ಡಿಸೆಂಬರ್ ಮುಗಿದು ಹೊಸ ವರ್ಷ ಬಂದ್ರೂ ಕಾಮಗಾರಿ ಮುಗಿದೇ ಇಲ್ಲ.
Advertisement
Advertisement
ಸಂಸದ ನಳಿನ್ ಕುಮಾರ್ ಹೀಗೆ ಡೆಡ್ ಲೈನ್ ನೀಡುವುದು, ಉದ್ಘಾಟನೆಗೆ ದಿನ ನಿಗದಿ ಮಾಡುವುದು ಮೊದಲೇನಲ್ಲ. ಒಂದು ವರ್ಷದಲ್ಲಿ ನಳಿನ್ ಕುಮಾರ್, ಹೀಗೆ ಐದು ಬಾರಿ ಡೆಡ್ ಲೈನ್ ನೀಡಿದ್ದಾರೆ. ಹೀಗಾಗಿ ನಳಿನ್ ಭರವಸೆ ಈ ಬಾರಿ ಭಾರೀ ಪ್ರಮಾಣದ ಟ್ರೋಲಿಗೆ ಕಾರಣವಾಗಿದೆ. ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಪಂಪ್ ವೆಲ್ ಫ್ಲೈ ಓವರ್ ಕಾಮಗಾರಿಗೆ ಇನ್ನೂ ಉದ್ಘಾಟನಾ ಭಾಗ್ಯ ಸಿಕ್ಕಿಲ್ಲ. ಕೆಲಸ ಆಮೆಗತಿಯಲ್ಲಿ ನಡೆಯುತ್ತಿರುವುದರಿಂದ ಸಂಸದ ನಳಿನ್ ಕುಮಾರ್ ಕಟೀಲ್ ಭಾರೀ ಟ್ರೋಲಿಗೆ ಒಳಗಾಗಿದ್ದು, ಜನರ ಟೀಕೆಗೆ ಗುರಿಯಾಗಿದ್ದಾರೆ.
Advertisement
Advertisement
ಟ್ರೋಲ್‍ಗಳಿಗೆ ಸಿಕ್ಕಾಪಟ್ಟೆ ಆಹಾರವಾಗಿರುವ ಪಂಪ್ ವೆಲ್ ಫ್ಲೈ ಓವರ್ ಮತ್ತು ನಳಿನ್ ಕುಮಾರ್ ಕಟೀಲ್ ಅವರಿಗೆ ಸದ್ಯಕ್ಕೆ ಮುಕ್ತಿ ಸಿಗುವ ಸಾಧ್ಯತೆಗಳು ಕಡಿಮೆ. ಕೇವಲ ಒಂದೂವರೆ ಕಿಲೋಮೀಟರ್ ಉದ್ದದ ಫ್ಲೈ ಓವರ್ ಕಾರ್ಯ ಅರ್ಧದಷ್ಟು ಮಾತ್ರ ಪೂರ್ಣಗೊಂಡಿದೆ. ನವಯುಗ ಕಂಪನಿ 2009 ರಿಂದ ಪಂಪ್ವೆಲ್ ಫ್ಲೈ ಓವರ್ ಕೆಲಸ ಮಾಡುತ್ತಿದ್ದು, ಕಾಮಗಾರಿ ಇನ್ನೂ ಮುಗಿದಿಲ್ಲ. ದೇಶದಲ್ಲೇ ಅತೀ ನಿಧಾನಗತಿಯ ಕಾಮಗಾರಿ ಮಂಗಳೂರಿನ ಪಂಪ್ವೆಲ್ ಫ್ಲೈ ಓವರ್ ಆಗಿರುವುದರಿಂದ ಸಂಸದ ನಳಿನ್ ಕುಮಾರ್ ಕಟೀಲ್ ಟ್ರೋಲ್ ಗಳಿಗೆ ಆಹಾರವಾಗುತ್ತಿದ್ದಾರೆ.
ಕುಂದಾಪುರದಿಂದ ತಲಪಾಡಿಯವರೆಗೆ 91 ಕಿಲೋ ಮೀಟರ್ ರಸ್ತೆಯನ್ನು ಚತುಷ್ಪಥಗೊಳಿಸುವ ಸುಮಾರು 1,300 ಕೋಟಿ ರೂ. ಯೋಜನೆಯಲ್ಲಿ ಈ ಪಂಪ್ ವೆಲ್ ಫ್ಲೈ ಓವರ್ ಕೂಡ ಒಂದು. ಆದರೆ ಕಂಪನಿ ನಷ್ಟದಲ್ಲಿ ಮುಳುಗಿದ್ದರಿಂದ ಕಾಮಗಾರಿ ಅರ್ಧಕ್ಕೆ ಸ್ಥಗಿತವಾಗಿತ್ತು. 6-7 ತಿಂಗಳ ಹಿಂದೆ ಕೇಂದ್ರ ಸರ್ಕಾರದಿಂದ ಸಾಲ ಪಡೆದು ಮತ್ತೆ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ನಿರೀಕ್ಷಿತ ವೇಗದಲ್ಲಿ ಕೆಲಸ ನಡೆಯದಿರುವ ಕಾರಣ ಫ್ಲೈ ಓವರ್ ಕೆಲಸ ಪೂರ್ಣಗೊಂಡಿಲ್ಲ. 8 ಪಿಲ್ಲರ್ ಗಳು ಎದ್ದು ನಿಂತಿದ್ದು, ಕಾಂಕ್ರೀಟ್ ಹಾಕುವುದು ಸೇರಿದಂತೆ ಇನ್ನೂ ಪ್ರಮುಖ ಕೆಲಸಗಳು ಬಾಕಿ ಇವೆ.
ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೈವೇ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ ನಳಿನ್ ಕುಮಾರ್ ಕಟೀಲ್, ಮತ್ತೆ ಜನವರಿ ಅಂತ್ಯಕ್ಕೆ ಡೆಡ್ ಲೈನ್ ನೀಡಿದ್ದಾರೆ. ಹೀಗಾಗಿ ಬಿಜೆಪಿ ರಾಜ್ಯಾಧ್ಯಕ್ಷ, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಕರಾವಳಿ ಜನ ಕಾತುರದಿಂದ ಕಾಯುತ್ತಿದ್ದ ಪಂಪ್ವೆಲ್ ಫ್ಲೈ ಓವರ್ ಉದ್ಘಾಟನೆ ಮತ್ತಷ್ಟು ವಿಳಂಬವಾಗಲಿದ್ದು, ಪಂಪ್ ವೆಲ್ ಫ್ಲೈ ಓವರ್ ಕರಾಳ ಇತಿಹಾಸದಲ್ಲಿ ಹುದುಗಿಹೋಗಲಿದೆ ಎಂದು ಜನ ಬೇಸರ ವ್ಯಕ್ತಪಡಿಸುತ್ತಿದ್ದಾರೆ.