ಮಂಗಳೂರು: ದೇಶದೆಲ್ಲೆಡೆ ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಬಿಸಿ ರಾಜ್ಯದ ಕರಾವಳಿಗೂ ತಟ್ಟಿದೆ. ಮಸೂದೆಯನ್ನು ವಿರೋಧಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರು ಮಂಗಳೂರಿನಲ್ಲಿ ರಸ್ತೆ ತಡೆ ಯತ್ನ ನಡೆದಿದ್ದು ಪೊಲೀಸರು ವಿದ್ಯಾರ್ಥಿಗಳು ಮೇಲೆ ಲಾಠಿಚಾರ್ಜ್ ನಡೆಸಿದ್ದಾರೆ.
ನಗರದ ಬಲ್ಮಠ ಜಂಕ್ಷನ್ ನಲ್ಲಿ ಬಲವಂತವಾಗಿ ರಸ್ತೆ ಬ್ಲಾಕ್ ಮಾಡಲು ಯತ್ನಿಸಿದ ವಿದ್ಯಾರ್ಥಿಗಳು ಹಾಗೂ ಯುವಕರ ಪ್ರತಿಭಟನೆಯನ್ನು ಪೊಲೀಸರು ತಡೆಯಲು ಯತ್ನಿಸಿದರು. ಈ ವೇಳೆ ರಸ್ತೆಯಲ್ಲೇ ಮಲಗಿ ಪೊಲೀಸರು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಪೊಲೀಸರು ಬಂಧಿಸಲು ಮುಂದಾದಾಗ ಪೊಲೀಸರ ಕಾರ್ಯಾಚರಣೆಗೆ ಅಡ್ಡಿ ಪಡಿಸಿದ್ದಾರೆ.
ಪ್ರತಿಭಟನಾಕಾರರು ರಸ್ತೆಯನ್ನು ಬಿಟ್ಟು ಮೇಲೆ ಏಳದೆ ಸಂಚಾರಕ್ಕೆ ತೊಂದರೆ ಮಾಡಿದ ಹಿನ್ನಲೆಯ ಕೊನೆಗೆ ಲಾಠಿಚಾರ್ಜ್ ಮಾಡುತ್ತಲೇ ರಸ್ತೆಗಂಟಿ ಕುಳಿತಿದ್ದ ಯುವಕರನ್ನು ಎತ್ತಿ ಪೊಲೀಸ್ ವಾಹನಕ್ಕೆ ತುಂಬಿಸಿದ್ದಾರೆ. ಯುವಕರು ಘೋಷಣೆ ಕೂಗುತ್ತಲೇ ಪೊಲೀಸರ ಜೊತೆ ಜಟಾಪಟಿ ನಡೆಸಿದ್ದಾರೆ. 50ರಷ್ಟು ಯುವಕರನ್ನು ಬಂಧಿಸಿದ್ದು ಸ್ಥಳದಲ್ಲಿದ್ದ ಇತರೇ ಮುಸ್ಲಿಂ ಯುವಕರು ಪೊಲೀಸರನ್ನು ಸುತ್ತುವರಿದಿದ್ದಲ್ಲದೆ ಪೊಲೀಸರ ಕ್ರಮವನ್ನು ಪ್ರಶ್ನೆ ಮಾಡಲಾರಂಭಿಸಿದ್ದಾರೆ.
ಪೊಲೀಸರು ಸಾಕಷ್ಟು ಸಂಖ್ಯೆಯಲ್ಲಿದ್ದರಿಂದ ಉದ್ರಿಕ್ತ ಗುಂಪನ್ನು ಚದುರಿಸಿದ್ದಾರೆ. ಪ್ರತಿಭಟನಾಕಾರರು ಹಿಡಿದಿದ್ದ ಭಿತ್ತಿಪತ್ರ, ಪತಾಕೆಗಳನ್ನು ಪೊಲೀಸರು ವಶಕ್ಕೆ ಪಡೆದರು. ಪ್ರತಿಭಟನೆ ಮಾಡಲು ಅವಕಾಶ ಇಲ್ಲದಿದ್ದರೂ ಪ್ರತಿಭಟನಾಕಾರರು ಯಾವುದೇ ಅನುಮತಿ ಪಡೆಯದೆ ಪ್ರತಿಭಟಿಸಿ ಸಂಚಾರಕ್ಕೆ ಸಮಸ್ಯೆ ಮಾಡಿದ್ದು ಪೊಲೀಸರ ಆಕ್ರೋಶಕ್ಕೆ ಕಾರಣವಾಗಿತ್ತು.