ಮಂಗಳೂರು: ಇಂದು ಬೆಳಗ್ಗೆ ನಿಲ್ದಾಣದಲ್ಲಿ ಪತ್ತೆಯಾದ ಬಾಂಬ್ ಇರಿಸಲಾಗಿದ್ದ ಶಂಕಿತ ವ್ಯಕ್ತಿಯ ಫೋಟೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಆಟೋದಲ್ಲಿ ಬಂದ ಅಪರಿಚಿತ ಟಿಕೆಟ್ ಕೌಂಟರ್ ಬಳಿ ಬ್ಯಾಗ್ ಇರಿಸಿ ನಾಪತ್ತೆ ಆಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿತ್ತು. ಮಂಗಳೂರು ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯಗಳ ಫೋಟೋ ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ಕ್ಯಾಪ್ ಹಾಕಿರುವ ಒಬ್ಬ ಕೈಯಲ್ಲಿ ಬುಕ್ ಹಿಡಿದಿದ್ದಾನೆ. ಈ ವ್ಯಕ್ತಿ ನಿಲ್ದಾಣದಿಂದ ಹೊರಹೋಗುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ. ಹಾಗೆಯೇ ಶಂಕಿತ ಬಂದಿದ್ದ ಎನ್ನಲಾದ ಆಟೋದ ಎರಡು ಫೋಟೋಗಳು ಸಹ ಪಬ್ಲಿಕ್ ಟಿವಿಗೆ ಲಭಿಸಿವೆ.
Advertisement
Advertisement
ಸಜೀವ ಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ಮಂಗಳೂರು ಸೇರಿದಂತೆ ಬಹುತೇಕ ನಗರಗಳಲ್ಲಿ ಕಚ್ಚೆಚ್ಚರ ವಹಿಸಲಾಗಿದೆ. ಶಂಕಿತ ಉಡುಪಿ ಮೂಲಕವೇ ಬೇರೆ ಕಡೆ ತೆರಳಿರುವ ಸಾಧ್ಯತೆಗಳಿವೆ ಎನ್ನಲಾಗಿದ್ದು, ಈ ಸಂಬಂಧ ಉಡುಪಿ ಪ್ರಮುಖ ರಸ್ತೆ, ಕೃಷ್ಣ ಮಠ, ರೈಲ್ವೇ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
Advertisement
ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದ 10 ಕೆಜಿ ತೂಕವುಳ್ಳ ಸಜೀವ ಬಾಂಬ್ ನ್ನು ಕೆಂಜಾರು ಮೈದಾನದಲ್ಲಿ ನಿಷ್ಕ್ರಿಯಗೊಳಿಸಲು ತೆಗೆದುಕೊಂಡು ಹೋಗಲಾಗಿದೆ. ಬಾಂಬ್ ನಿಷ್ಕ್ರಿಯಗೊಳ್ಳದ ಹಿನ್ನೆಲೆಯಲ್ಲಿ ರಿಮೋಟ್ ಕಂಟ್ರೋಲರ್ ಮೂಲಕ ಸ್ಫೋಟಿಸುವ ಸಾಧ್ಯತೆಗಳು ಹೆಚ್ಚಿವೆ.
Advertisement
ಒಂದೆಡೆ ಕೆಂಜಾರು ಮೈದಾನದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದರೆ, ಇಂಡಿಗೋ ವಿಮಾನಯಾನ ಸಂಸ್ಥೆಗೆ ಬೆದರಿಕೆ ಕರೆಯೊಂದು ಬಂದಿದೆ. ಬೆದರಿಕೆ ಕರೆ ಬಂದ ಕೂಡಲೇ ಕಾರ್ಯಪ್ರವೃತ್ತರಾದ ಸಿಬ್ಬಂದಿ ಮಂಗಳೂರಿನಿಂದ ಹೈದರಾಬಾದ್ ಗೆ ಟೇಕಾಫ್ ಆಗುತ್ತಿದ್ದ ವಿಮಾನವನ್ನು ತಡೆದಿದ್ದಾರೆ. ಮುಂಜಾಗ್ರತ ಕ್ರಮವಾಗಿ ವಿಮಾನದಲ್ಲಿದ್ದ ಎಲ್ಲ 126 ಪ್ರಯಾಣಿಕರನ್ನು ಕೆಳಗಿಳಿಸಿ ಪರಿಶೀಲನೆ ನಡೆಸಲಾಗಿದೆ.