– 38 ಆರೋಪಿಗಳು ಅರೆಸ್ಟ್
– ಅನುಮತಿ ಪಡೆದವರಿಗೆ ಮಾತ್ರ ಪ್ರತಿಭಟನೆಗೆ ಅವಕಾಶ
ಮಂಗಳೂರು: ಪೌರತ್ವ ಮಸೂದೆ ಜಾರಿ ವಿರುದ್ಧ ವಿದೇಶದಿಂದ ಸುಳ್ಳು ಸಂದೇಶ ಕಳುಹಿಸುವವರು ಹಾಗೂ ಮಸೂದೆಯನ್ನು ಖಂಡಿಸಿ ಅನುಮತಿ ಪಡೆಯದೇ ಪ್ರತಿಭಟನೆ ನಡೆಸುವವರ ಮೇಲೆ ಪೊಲೀಸರು ನಿಗಾ ವಹಿಸಲಿದ್ದು, ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ಖಡಕ್ ಎಚ್ಚರಿಕೆ ನೀಡಿದ್ದಾರೆ.
ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾರತದ ಸಂವಿಧಾನದಲ್ಲಿ ಎಲ್ಲರಿಗೂ ಅವರವರ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಇದೆ. ಆದ್ರೆ ಅಭಿಪ್ರಾಯ ಮಂಡಿಸುವವರು ಕಾನೂನಾತ್ಮಕವಾಗಿ ಅಭಿಪ್ರಾಯ ವ್ಯಕ್ತಪಡಿಸಬಹುದು. ಈಗಾಗಲೇ ಪ್ರತಿಭಟನೆ ನಡೆಸಲು ಅನುಮತಿ ಕೋರಿ 6 ಅರ್ಜಿ ಬಂದಿತ್ತು, ಅರ್ಜಿ ಪರಿಶೀಲಿಸಿ ಅವರಿಗೆ ಅನುಮತಿ ನೀಡಿದ್ದೇವೆ. ಆದರೆ ಕೆಲವು ಸಂಘಟನೆಯವರು ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿದರು. ಈ ಬಗ್ಗೆ ಮಂಗಳೂರು ನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು
Advertisement
Advertisement
ರಸ್ತೆ ತಡೆ ನಡೆಸಿದ 38 ಜನರನ್ನು ಬಂಧಿಸಿದ್ದೇವೆ. ಬೇರೆ ರಾಜ್ಯದವರು ಮಂಗಳೂರಿಗೆ ಬಂದು ಪ್ರತಿಭಟನೆ ನಡೆಸುವುದಕ್ಕೆ ಅನುಮತಿ ಕೇಳಿದ ಬಗ್ಗೆಯೂ ಮಾಹಿತಿ ನೀಡಿದ ಕಮಿಷನರ್ ಅವರು ಪ್ರತಿಭಟನೆಗೆ ಅನುಮತಿ ನೀಡಿಲ್ಲ. ಇದೇ ತಿಂಗಳ 20 ರಿಂದ 23ನೇ ತಾರೀಖಿನವರೆಗೆ ವಿವಿಧ ಸಂಘಟನೆಯ ಹೆಸರಿನಲ್ಲಿ ಮಂಗಳೂರಿನ ನೆಹರು ಮೈದಾನದಲ್ಲಿ ಬೃಹತ್ ಪ್ರತಿಭಟನೆ ಇದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಫೇಕ್ ಸಂದೇಶ ಹರಿಯ ಬಿಡಲಾಗುತ್ತಿದೆ. ಅಂತವರಿಗೆ ಈಗಾಗಲೇ ನೋಟಿಸ್ ನೀಡಿದ್ದೇವೆ. ಹಾಗೂ ಪ್ರತಿಭಟನೆ ನಡೆಸುವುದಕ್ಕೆ ಯಾರು ಅನುಮತಿ ಕೋರಿಲ್ಲ ಎಂದು ಕಮಿಷನರ್ ಸ್ಪಷ್ಟಪಡಿಸಿದ್ದಾರೆ.
Advertisement
ವಿದೇಶದಿಂದ ಈ ಮಸೂದೆಯ ವಿರುದ್ಧ ಫೇಕ್ ಸಂದೇಶಗಳನ್ನು ಕಳುಹಿಸುತ್ತಿರುವವರು ಯಾರು ಎಂಬುದನ್ನು ಈಗಾಗಲೇ ಪತ್ತೆಹಚ್ಚಲಾಗಿದ್ದು, ಅವರ ವಿರುದ್ಧವೂ ಕಠಿಣ ಕ್ರಮಕೈಗೊಳ್ಳುತ್ತೇವೆ. ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನಾ ಎಚ್ಚರಿಕೆ ಹಿನ್ನೆಲೆಯಲ್ಲಿ ಡಿಸೆಂಬರ್ 20 ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತದೆ ಎನ್ನುವ ಸುದ್ದಿ ಹಬ್ಬಿರೋದ್ರಿಂದ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಮಂಗಳೂರು ನಗರದಲ್ಲಿ 144 ಸೆಕ್ಷನ್ ಜಾರಿಗೊಳಿಸಿದ್ದಾರೆ.
Advertisement
ಇಂದು ರಾತ್ರಿ 9 ಗಂಟೆಯಿಂದ ಡಿಸೆಂಬರ್ 20 ರ ಮಧ್ಯರಾತ್ರಿ ತನಕ ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿಗೊಳಿಸಿದ್ದು ಹೆಚ್ಚಿನ ಪೊಲೀಸ್ ನಿಯೋಜನೆಯನ್ನೂ ಮಾಡಿದ್ದಾರೆ. ಅಂದು ಯಾವುದೇ ಸಂಘಟನೆಗಳು, ರಾಜಕೀಯ ಪಕ್ಷಗಳು ಪ್ರತಿಭಟನೆಗಾಗಿ ಅನುಮತಿ ಪಡೆದಿಲ್ಲ. ಒಂದು ವೇಳೆ ಅನುಮತಿ ಪಡೆಯದೆ ಪ್ರತಿಭಟಿಸಿದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಕಮಿಷನರ್ ಎಚ್ಚರಿಸಿದ್ದಾರೆ.