ಮಂಗಳೂರು: ಫೇಸ್‌ಬುಕ್‌ನಲ್ಲಿ ಪ್ರಚೋದನಕಾರಿ ಪೋಸ್ಟ್ ಶೇರ್ ಮಾಡಿದ ಆರೋಪದಲ್ಲಿ ಹಿಂದೂ ಮುಖಂಡ, ವಿಹೆಚ್‌ಪಿ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ (Sharan Pumpwell) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರ್‌ಎಸ್‌ಎಸ್ ಮುಖಂಡರೊಬ್ಬರ ಭಾಷಣದ ವಿಡಿಯೋ ಶೇರ್ ಮಾಡಿದ್ದ ಆರೋಪದಲ್ಲಿ ಪಂಪ್‌ವೆಲ್ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಮಂಗಳೂರಿನ ಕದ್ರಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕದ್ರಿ ಠಾಣೆಯ ನಾಗರಾಜ್ ಭರ್ಜರಿ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಬೆಳವಣಿಗೆ ಬೆನ್ನಲ್ಲೇ ಕದ್ರಿ ಪೊಲೀಸ್ ಠಾಣೆಗೆ ಬಿಜೆಪಿ ಶಾಸಕ ವೇದವ್ಯಾಸ ಕಾಮತ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಭೇಟಿ ನೀಡಿ ವಿಚಾರಿಸಿದ್ದಾರೆ. ಪೊಲೀಸ್ ಠಾಣೆಯ ಬಳಿ ಹಿಂದೂ ಸಂಘಟನೆಯ ಕಾರ್ಯಕರ್ತರು ಜಮಾಯಿಸಿದ್ದಾರೆ. ಯಾವುದೇ ನೋಟಿಸ್ ನೀಡದೇ ಕರೆದುಕೊಂಡು ಹೋದ ಆರೋಪ ವ್ಯಕ್ತವಾಗಿದೆ. ಸದ್ಯ ಪೊಲೀಸ್ ಅಧಿಕಾರಿಗಳ ಜೊತೆ ಶಾಸಕರು, ನಾಯಕರು ಮಾತುಕತೆ ನಡೆಸಿದ್ದಾರೆ.
ಬಿಜೆಪಿ ಮುಖಂಡ ವಿಕಾಸ್ ಪುತ್ತೂರು ಎಂಬವರು ಆರ್‌ಎಸ್‌ಎಸ್ ಮುಖಂಡರ ಭಾಷಣದ ತುಣುಕು ಶೇರ್ ಮಾಡಿದ್ದರು. ಕಳೆದ ಎರಡು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಮಕ್ಕಳು ಹುಟ್ಟಿದರು ಎಂಬ ಬಗ್ಗೆ ಆರ್‌ಎಸ್‌ಎಸ್ ಮುಖಂಡ ಭಾಷಣ ಮಾಡಿದ್ದರು. ಮುಸ್ಲಿಮರ ಜನಸಂಖ್ಯೆ ಜಿಹಾದ್ ಮೆಟ್ಟಿ ನಿಲ್ಲೋಣ ಎಂಬ ವಾಕ್ಯದೊಂದಿಗೆ ಭಾಷಣದ ತುಣುಕನ್ನು ವಿಕಾಸ್ ಪುತ್ತೂರು ಶೇರ್ ಮಾಡಿದ್ದರು. ಅದೇ ಪೋಸ್ಟನ್ನು ಶರಣ್ ಪಂಪ್‌ವೆಲ್ ಹಂಚಿಕೊಂಡಿದ್ದರು. ಸದ್ಯ ಎ1 ಆರೋಪಿ ವಿಕಾಸ್ ಪುತ್ತೂರು, ಎ2 ಆರೋಪಿ ಶರಣ್ ಪಂಪ್‌ವೆಲ್ ವಿರುದ್ಧ ಬಿಎನ್‌ಎಸ್ 353 (2), ಅಡಿ ಎಫ್‌ಐಆರ್ ದಾಖಲಾಗಿದೆ.
ಕದ್ರಿ ಪೊಲೀಸ್ ಠಾಣೆ ಮುಂಭಾಗ ಶರಣ್ ಪಂಪ್‌ವೆಲ್ ಆಕ್ರೋಶ ಹೊರಹಾಕಿದ್ದಾರೆ. ಸಾಮಾಜಿಕ ಮುಖಂಡನಾಗಿ ಸಮಾಜದ ಆಗುಹೋಗುಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದೆ. ಆದರೆ, ನೋಟಿಸ್ ಕೊಟ್ಟು ಅರೆಸ್ಟ್ ಮಾಡುವ ಬದಲು ಬೇರೆ ಬೇರೆ ವರ್ತನೆ ತೋರಿದ್ದಾರೆ. ಈಗ ನೋಟಿಸ್ ಕೊಟ್ಟು ಡಿಸಿಪಿ ಮುಂದೆ ಹಾಜರುಪಡಿಸಲು ಕರೆದುಕೊಂಡು ಹೋಗುತ್ತಿದ್ದಾರೆ. ಆದರೆ, ಯಾವುದೇ ನೋಟಿಸ್ ನೀಡದೆ ಬಂಧನ ಮಾಡುವ ಪ್ರಯತ್ನ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಜನಸಂಖ್ಯೆ ಸಂಬಂಧ ಮಾಡಿದ ಪೋಸ್ಟ್ಗೆ ಬಂಧನ ಮಾಡಲು ಮುಂದಾಗಿದ್ದರು. ಅಭಿವ್ಯಕ್ತಿ ಸ್ವಾತಂತ್ರ‍್ಯ ಕಿತ್ತುಕೊಳ್ಳುವ ಪ್ರಯತ್ನಕ್ಕೆ ಸರ್ಕಾರ ಮುಂದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 


 
		 
		 
		 
		 
		
 
		 
		 
		 
		