ಉಡುಪಿ: ಕಟೀಲು ಯಕ್ಷಗಾನ ಮೇಳದ ಭಾಗವತ ಪಟ್ಲ ಸತೀಶ್ ಶೆಟ್ಟಿಯನ್ನು ಈ ಬಾರಿ ತಿರುಗಾಟದಿಂದ ಕೈಬಿಡಲಾಗಿದೆ. ಈ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತಲೋಕದ ಎಂಟ್ರಿಯಾಗಿದೆ.
ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದ ಭಾಗವತ ಸತೀಶ್ ಪಟ್ಲ ಅವರಿಗೆ ಈ ಬಾರಿ ಗೇಟ್ ಪಾಸ್ ಕೊಡಲಾಗಿದೆ. ಒಂದು ವಾರದಿಂದ ಈ ಬೆಳವಣಿಗೆ ಕರಾವಳಿಯ ಜಿಲ್ಲೆಯಲ್ಲಿ ಚರ್ಚೆಯ ವಿಷಯವಾಗಿದೆ. ಪ್ರಕರಣದಲ್ಲಿ ಕಟೀಲು ದೇವಸ್ಥಾನದ ಮೇಳದ ಮ್ಯಾನೇಜರ್ ಗೆ ಬೆಂಬಲಿಸಿದ್ದ ಪಡುಬಿದ್ರೆ ಉದ್ಯಮಿಗೆ ಭೂಗತ ಲೋಕದಿಂದ ಬೆದರಿಕೆ ಕರೆ ಬಂದಿದೆ.
ಉದ್ಯಮಿ ಧನಪಾಲ್ ಶೆಟ್ಟಿಗೆ ವಿಕ್ಕಿ ಶೆಟ್ಟಿ ಎಂಬಾತನಿಂದ ಕೊಲೆ ಬೆದರಿಕೆ ಕರೆ ಬಂದಿದ್ದು ಈ ಸಂಬಂಧ ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧನಪಾಲ್ ಶೆಟ್ಟಿ ಪ್ರತಿಕ್ರಿಯಿಸಿ, ವಿಕ್ಕಿ ಶೆಟ್ಟಿ ಭಾಗವತ ಪಟ್ಲ ಸತೀಶ್ ಶೆಟ್ಟಿ ಸಹೋದರನಾಗಿದ್ದು, ಈತ ಭೂಗತ ಲೋಕದ ನಂಟಿರುವ ವ್ಯಕ್ತಿ. ಮೇಳದ ಮ್ಯಾನೇಜರ್ ಕಲ್ಲಾಡಿ ದೇವಿಪ್ರಸಾದ್ ಗೆ ಬೆಂಬಲಿಸಿದ್ದಕ್ಕೆ ಬೆದರಿಕೆ ಹಾಕಿದ್ದು, ನಿನ್ನನ್ನು ಕೊಲೆ ಮಾಡುವುದಾಗಿ ಫೋನ್ ಕರೆಯಲ್ಲಿ ಎಚ್ಚರಿಕೆ ನೀಡಿದ್ದಾನೆ. ಈ ಸಂಬಂಧ ಭಾಗವತ ಪಟ್ಲ ಸತೀಶ್ ಶೆಟ್ಟಿ ಮತ್ತು ವಿಕ್ಕಿ ಶೆಟ್ಟಿ ವಿರುದ್ಧ ದೂರು ನೀಡಿದ್ದೇವೆ. ನನ್ನ ಗೆಳೆಯ ಗಣಪತಿ ಕಾಮತ್ ಎಂಬವರಿಗೆ ಕರೆ ಮಾಡಿ ತಾನು ವಿಕ್ಕಿ ಶೆಟ್ಟಿ ಎಂದು ಹೇಳಿಕೊಂಡಿದ್ದಾನೆ. ಕಟೀಲು ಪ್ರಕರಣದಲ್ಲಿ ಕಲ್ಲಾಡಿಗೆ ಬೆಂಬಲಿಸಿದರೆ ಸುಮ್ಮನಿರಲ್ಲ. ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಹೇಳಿದ್ದಾರೆ.