ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಅಭಿನಂದನೆ ಸಲ್ಲಿಸಿ ಹಾಕಲಾದ ಬ್ಯಾನರ್ ಗೆ ಮಸಿ ಬಳಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಕದ್ರಿ ಪಾರ್ಕ್ ಹಾಗೂ ಇತರ ಕಡೆ ಹಾಕಲಾದ ಬ್ಯಾನರ್ ನಲ್ಲಿ ಸಂಸದ ನಳಿನ್ ಚಿತ್ರಕ್ಕೆ ಮಸಿ ಬಳಿದು ಜೈ ನೇತ್ರಾವತಿ ಅಂತ ಬರೆದಿದ್ದಾರೆ.
ಎತ್ತಿನ ಹೊಳೆ ಯೋಜನೆಗೆ ರಾಜ್ಯ ಸರಕಾರ ಬಜೆಟ್‍ನಲ್ಲಿ 1,500 ಕೋಟಿ ಬಿಡುಗಡೆ ಮಾಡಿದೆ. ಇದು ಕರಾವಳಿಗರ ಕಣ್ಣು ಕೆಂಪಾಗಿಸಿದೆ. ಈ ಹಿಂದೆ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಎತ್ತಿನ ಹೊಳೆ ಯೋಜನೆಗೆ ಪ್ರಾರಂಭದಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಎತ್ತಿನ ಹೊಳೆ ಯೊಜನೆ ವಿರುದ್ಧದ ಹೋರಾಟದಲ್ಲಿ ಕೂಡ ಪಾಲ್ಗೊಂಡು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
ಆದರೆ ಇದೀಗ ಅವರೇ ರಾಜ್ಯಾಧ್ಯಕ್ಷರಾಗಿರುವ ಬಿಜೆಪಿ ಸರ್ಕಾರದ ಬಜೆಟ್‍ನಲ್ಲಿ ಹಣ ಬಿಡುಗಡೆ ಮಾಡಿದರೂ ನಳಿನ್ ಮೌನವಾಗಿದ್ದು, ಜಿಲ್ಲೆಯ ಪರಿಸರವಾದಿಗಳ ಸಹಿತ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ವಿಚಾರ ಇಟ್ಟುಕೊಂಡು ಮಸಿ ಬಳಿದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಯಾರು ಈ ರೀತಿ ಮಾಡಿದ್ದಾರೆ ಎನ್ನುವುದು ಗೊತ್ತಾಗಿಲ್ಲ. ಮಸಿ ಬಳಿದ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಇದನ್ನೂ ಓದಿ: ಎತ್ತಿನಹೊಳೆ ಯೋಜನೆಗೆ ಮತ್ತೆ 1,500ಕೋಟಿ ಬಿಡುಗಡೆ: ಕಟೀಲ್ ದ್ವಿಪಾತ್ರದಲ್ಲಿ ಅಭಿನಯ