– ಒಂದು ಲಕ್ಷ ಜನ ಸೇರುವ ನಿರೀಕ್ಷೆ
– 5,000 ಪೊಲೀಸರಿಂದ ಬಂದೋಬಸ್ತ್
ಮಂಗಳೂರು: ಪೌರತ್ವ ತಿದ್ದುಪಡೆ ಕಾಯ್ದೆ ವಿಚಾರದಲ್ಲಿ ರಕ್ತಪಾತಕ್ಕೆ ಸಾಕ್ಷಿಯಾಗಿದ್ದ ಮಂಗಳೂರಿನಲ್ಲಿ ಮತ್ತೆ ಕದನದ ವಾತಾವರಣ ಏರ್ಪಡುತ್ತಿದೆ. ಮುಸ್ಲಿಂ ಸಂಘಟನೆಗಳು ಮಂಗಳೂರಿನಲ್ಲಿ ಮತ್ತೆ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು ತಮ್ಮ ಶಕ್ತಿಪ್ರದರ್ಶನ ಮಾಡಲು ಮುಂದಾಗಿವೆ. ಸಮಾವೇಶದ ಹಿನ್ನೆಲೆ ಪೊಲೀಸರು ಮಂಗಳೂರಿನಲ್ಲಿ ಇನ್ನಿಲ್ಲದ ಕಟ್ಟೆಚ್ಚರ ವಹಿಸಿದ್ದಾರೆ.
ಡಿಸೆಂಬರ್ 19ರ ಹಿಂಸಾಚಾರ, ಗೋಲಿಬಾರ್, ಕರ್ಫ್ಯೂ ಘಟನೆಯಿಂದ ಬೆಂದು ಹೋಗಿದ್ದ ಮಂಗಳೂರಿನಲ್ಲಿ ಮತ್ತೆ ಪೌರತ್ವ ಕಾಯ್ದೆಯ ಬಿಸಿ ಕಾಣಿಸಿಕೊಂಡಿದೆ. ವಿವಿಧ ಮುಸ್ಲಿಂ ಸಂಘಟನೆಗಳು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಸೆಂಟ್ರಲ್ ಕಮಿಟಿ ನೇತೃತ್ವದಲ್ಲಿ ಸಮಾವೇಶ ಹಮ್ಮಿಕೊಂಡಿದ್ದು, ಪೌರತ್ವ ಬಿಸಿಯಿಂದಾಗಿ ಸಮಾವೇಶ ಶಕ್ತಿ ಪ್ರದರ್ಶನವಾಗಿ ಮಾರ್ಪಡುವ ಸಾಧ್ಯತೆಯಿದೆ.
ಕೇಂದ್ರ ಸರ್ಕಾರದ ಸಿಎಎ ಮತ್ತು ಎನ್‍ಆರ್‍ಸಿ ಕಾಯ್ದೆಯನ್ನು ವಿರೋಧಿಸಿ ಸಮಾವೇಶ ನಡೆಯಲಿದ್ದು, ಇದಕ್ಕಾಗಿ ನಗರದ ಹೊರವಲಯದ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಅಡ್ಯಾರ್ ಎಂಬಲ್ಲಿನ ಮೈದಾನದಲ್ಲಿ ಭಾರೀ ಸಿದ್ಧತೆ ನಡೆಸಲಾಗಿದೆ. ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನ ಸೇರುವ ಸಾಧ್ಯತೆ ಇದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿಯ ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ ನಗರದಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಈಗಾಗಲೇ ಆರ್‌ಪಿ, ಸಿಎಆರ್, ಆರ್‌ಎಎಫ್ ತುಕಡಿಗಳನ್ನು ಕರೆಸಲಾಗಿದ್ದು, ಸುಮಾರು ಐದು ಸಾವಿರ ಪೊಲೀಸರು ಬೀಡುಬಿಟ್ಟಿದ್ದಾರೆ.
ಕಳೆದ ಬಾರಿ 144 ಸೆಕ್ಷನ್ ಉಲ್ಲಂಘಿಸಿ, ಮುಸ್ಲಿಂ ಗುಂಪು ಪ್ರತಿಭಟನೆಗೆ ಮುಂದಾಗಿದ್ದು ಹಿಂಸೆಗೆ ಕಾರಣವಾಗಿತ್ತು. ಬಳಿಕ ಹಿಂಸಾಚಾರ ನಿಗ್ರಹಕ್ಕಾಗಿ ಪೊಲೀಸರು ಗುಂಡು ಹಾರಿಸಿದ ಪರಿಣಾಮ ಇಬ್ಬರು ಮೃತಪಟ್ಟಿದ್ದರು. ಈ ಹಿನ್ನೆಲೆ ಪೊಲೀಸರ ವಿರುದ್ಧ ಭಾರೀ ಆಕ್ರೋಶವೂ ಕೇಳಿಬಂದಿತ್ತು. ಇದರಿಂದಾಗಿ ಮಂಗಳೂರು ನಗರದ ಒಳಗೆ ಪ್ರತಿಭಟನೆಗೆ ಪೊಲೀಸರು ಅವಕಾಶ ನಿರಾಕರಿಸಿದ್ದರು. ಆನಂತರ ಜಿಲ್ಲೆಯ ವಿವಿಧ ಕಡೆ ಮುಸ್ಲಿಂ ಸಂಘಟನೆಗಳು ಪ್ರತಿಭಟನಾ ಸಮಾವೇಶ ಏರ್ಪಡಿಸಿ, ಮೂಲೆ ಮೂಲೆಯ ಯುವ ಜನರನ್ನು ಎಚ್ಚರಿಸುವ ಕೆಲಸ ಮಾಡಿದ್ದವು. ಇದೀಗ ಕೊನೆಯದಾಗಿ ಮಂಗಳೂರು ಹೊರವಲಯದ ಅಡ್ಯಾರ್ ಬಳಿಯ ಬೃಹತ್ ಮೈದಾನದಲ್ಲಿ ಸಮಾವೇಶ ಏರ್ಪಡಿಸಿದ್ದು ದಕ್ಷಿಣ ಕನ್ನಡ, ಉಡುಪಿಯಿಂದಲೂ ಜನ ಆಗಮಿಸಲಿದ್ದಾರೆ.
ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಅವರು ಮಂಗಳೂರಿನಲ್ಲೇ ಬೀಡು ಬಿಟ್ಟಿದ್ದು, ಸಮಾವೇಶ ನಡೆಯುವ ಮೈದಾನದ ಭಧ್ರತೆಯನ್ನು ಪರಿಶೀಲಿಸಿದ್ದಾರೆ. ಮೈದಾನದ ಪಾರ್ಕಿಂಗ್, ವೇದಿಕೆ, ಭಧ್ರತೆ ಬಗ್ಗೆ ಮಂಗಳೂರು ಕಮಿಷನರ್ ಪಿ.ಎಸ್.ಹರ್ಷ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಕೇಂದ್ರ ಅರೆಸೇನಾ ಪಡೆಗಳನ್ನು ಕರೆಸಿಕೊಳ್ಳಲಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಎಲ್ಲಾ ಕ್ರಮ ಕೈಗೊಂಡಿದ್ದಾಗಿ ಹೇಳಿದ್ದಾರೆ.
ಒಂದುಕಡೆ ಶಕ್ತಿ ಪ್ರದರ್ಶನ, ಇನ್ನೊಂದೆಡೆ ಕೇಂದ್ರ ಸರ್ಕಾರದ ವಿರುದ್ಧ ಒತ್ತಡ ಹೇರುವ ನಿಟ್ಟಿನಲ್ಲಿ ಪ್ರತಿಭಟನಾ ಸಮಾವೇಶ ನಡೆಯುತ್ತಿದೆ. ಹೀಗಾಗಿ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವುದು ಪೊಲೀಸರಿಗೆ ಸವಾಲಾಗಲಿದೆ ಎಂಬ ಮಾತು ಕೇಳಿ ಬಂದಿದೆ.