ಮಂಗಳೂರು: ಬಿಜೆಪಿಯ ಸಿಎಎ ಸಮಾವೇಶದಲ್ಲಿ ಮಾಜಿ ಸಚಿವ, ಶಾಸಕ ಯು.ಟಿ. ಖಾದರ್ ಅವರಿಗೆ ಕೊಲೆ ಬೆದರಿಕೆ ಹಾಕಿದವರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳೆದ ಜನವರಿ 27ರಂದು ಮಂಗಳೂರಿನ ಕೂಳೂರು ಬಳಿಯ ಗೋಲ್ಡ್ ಪಿಂಚ್ ಸಿಟಿಯಲ್ಲಿ ನಡೆದಿದ್ದ ಸಮಾವೇಶದಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರ ತಂಡವೊಂದು ಘೋಷಣೆಗಳನ್ನು ಕೂಗುತ್ತಾ ಮಾಜಿ ಸಚಿವ ಯು.ಟಿ.ಖಾದರ್ ಅವರಿಗೆ ಕೊಲೆ ಬೆದರಿಕೆ ಹಾಕಿತ್ತು. ಮಲಯಾಳಂ ಭಾಷೆಯಲ್ಲಿ ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು.
‘ಖಾದರ್ ನಮ್ಮ ಸುದ್ದಿಗೆ ಬರಬೇಡ. ನಮ್ಮ ಸುದ್ದಿಗೆ ಬಂದರೆ, ಕೈ ಕಾಲು ಎರಡೂ ಕಟ್, ಬೇಕಾಗಿದ್ದಲ್ಲಿ ತಲೆಯನ್ನು ಕಡಿಯುವೆವು’ ಎಂದು ಬೆದರಿಕೆ ಹಾಕಿದ ಘೋಷಣೆ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಕಾವೂರು ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಜನಜಾಗೃತಿ ಸಭೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಭಾಗಿಯಾಗಿದ್ದರೂ ಕಾರ್ಯಕರ್ತರು ಈ ರೀತಿಯ ಘೋಷಣೆ ಕೂಗಿ ಕೊಲೆ ಬೆದರಿಕೆ ಹಾಕಿದ್ದು ವ್ಯಾಪಕ ಟೀಕೆಗೆ ಕಾರಣವಾಗಿದೆ.