‘ಈರ್ ಬಿಜೆಪಿದ ರಾಜ್ಯಾಧ್ಯಕ್ಷೆರತ್ತಾ? ಈರೆಗ್ ಒಂಜಿ ಮಿನಿಸ್ಟರ್ ಕೊರ್ಪಾಯರೆ ಆಪುಜಾ..? ಈರೆನ ಕೋಟಡ್ ಕರಾವಳಿಗ್ ಒಂಜಿ ಮಂತ್ರಿ ಮಲ್ಪಾಲೆಯೇ….’ (ನೀವು ಬಿಜೆಪಿ ರಾಜ್ಯಾಧ್ಯಕ್ಷರಲ್ವಾ.? ಒಬ್ಬರಿಗೆ ಸಚಿವ ಸ್ಥಾನ ಕೊಡಿಸೋಕೆ ನಿಮಗಾಗಲ್ವಾ? ನಿಮ್ಮ ಕೋಟಾದಲ್ಲಿ ಕರಾವಳಿಯ ಒಬ್ಬರನ್ನು ಸಚಿವರನ್ನಾಗಿ ಮಾಡಿ) ಹೀಗಂತ ಕರಾವಳಿಯ ಬಿಜೆಪಿ ಶಾಸಕರು ಮತ್ತು ಅನೇಕ ಪ್ರಮುಖರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಟಾಸ್ಕ್ ಕೊಟ್ಟಿದ್ದಾರಂತೆ…!
Advertisement
ಹೌದು, ರಾಜ್ಯ ಬಿಜೆಪಿ ಸರ್ಕಾರದಲ್ಲಿ ಮಂತ್ರಿಗಿರಿ ಗಿಟ್ಟಿಸಿಕೊಳ್ಳಲು ಶಾಸಕರು ನಡೆಸುತ್ತಿರುವ ತರಾವರಿ ಪ್ರಯತ್ನದ ಭಾಗ ಇದು. ಕರಾವಳಿ ಬಿಜೆಪಿಯ ಭದ್ರಕೋಟೆ. ರಾಜ್ಯದ ಇತರೆ ಜಿಲ್ಲೆಗಳಿಗೆ ಪಕ್ಷ ಸಂಘಟನೆಗೆ ಕರಾವಳಿಯೇ ಮಾದರಿ. ಕರಾವಳಿಯ ಮೂರು ಜಿಲ್ಲೆಗಳಲ್ಲಿ ಬಿಜೆಪಿಯ 16 ಶಾಸಕರು ಗೆದ್ದಿದ್ದಾರೆ. ಒಂದೇ ಒಂದು ಸಚಿವರನ್ನು ಮಾಡಿಲ್ಲಾಂದ್ರೆ ಹೇಗೆ.? ಇದು ಕರಾವಳಿ ಶಾಸಕರು ಎತ್ತಿರುವ ಪ್ರಶ್ನೆ. ಅದಕ್ಕೆ ಅವರು ಎಲ್ಲಾ ರೀತಿಯ ಪ್ರಯತ್ನ ನಡೆಸಿ ಸೋತು ಹೋಗಿದ್ದಾರೆ. ಅವರಿಗೆ ಉಳಿದಿರುವುದು ಒಂದೇ ದಾರಿ. ಅದು ಬಿಜೆಪಿ ರಾಜ್ಯಾಧ್ಯಕ್ಷ ಕೋಟಾ. ಕರಾವಳಿಯವರೇ ಆದ ನಳಿನ್ ಕುಮಾರ್ ಕಟೀಲ್ ಅವರು ಪಕ್ಷದ ಅಧ್ಯಕ್ಷರಾದ್ದರಿಂದ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅವರ ಅಭಿಪ್ರಾಯಕ್ಕೆ ಮನ್ನಣೆ ಸಿಗುತ್ತೆ ಅನ್ನೋ ಆಶಾವಾದ. ಹಾಗಾಗಿಯೇ ಕರಾವಳಿಯ ಶಾಸಕರು, ಮುಖಂಡರು ಕಟೀಲ್ ಅವರಿಗೆ ಟಾಸ್ಕ್ ನೀಡಿದ್ದಾರಂತೆ. ನೀವು ರಾಜ್ಯಾಧ್ಯಕ್ಷರು ನಿಮ್ಮ ಅಭಿಪ್ರಾಯಕ್ಕೆ ಮನ್ನಣೆ ಸಿಗುತ್ತದೆ. ಹಾಗಾಗಿ ಕರಾವಳಿಯ 16 ಶಾಸಕರ ಪೈಕಿ ಕನಿಷ್ಠ ಇಬ್ಬರಿಗೆ ಸಚಿವ ಸ್ಥಾನ ಕೊಡಿಸಿ, ನಿಮ್ಮ ಮಾತು ನಡೆಯುತ್ತೆ ಅಂತ ಒತ್ತಡ ಹೇರುತ್ತಿದ್ದಾರಂತೆ.
Advertisement
Advertisement
ಈ ವಿದ್ಯಮಾನದಿಂದ ನಳಿನ್ ಕಂಗಾಲಾಗಿದ್ದಾರಂತೆ. ಯಾಕೆ ಗೊತ್ತಾ? ಯಡಿಯೂರಪ್ಪ ಅವರ ಬಳಿ ಇದನ್ನು ಕೇಳಲು ನನ್ನಿಂದ ಸಾಧ್ಯವಿಲ್ಲ. ಅವರೆಲ್ಲಿ ನನ್ನ ಮಾತು ಕೇಳ್ತಾರೆ ಅಂತ ಚಿಂತೆಗೀಡಾಗಿದ್ದಾರಂತೆ. ಯಡಿಯೂರಪ್ಪ ನಿಮ್ಮ ಬಳಿ ಚರ್ಚಿಸದೇ ಸಂಪುಟ ವಿಸ್ತರಿಸ್ತಾರಾ..? ನೀವು ರಾಜ್ಯಾಧ್ಯಕ್ಷರಲ್ವಾ ಅಂತ ಹೇಳಿದ್ರೆ ನಳಿನ್ ಕುಮಾರ್ ಅವರು, ನೋಡಿ ಏನಿದ್ರೂ ಅದು ಸಿಎಂ ಅಧಿಕಾರ ಮತ್ತು ವರಿಷ್ಠರು ಹೇಳಿದ ಹಾಗೆ ಅಂತ ತಪ್ಪಿಸಿಕೊಳ್ತಿದ್ದಾರಂತೆ. ಆದ್ರೆ ಕರಾವಳಿಯ ನಾಯಕರು ಬಿಡಬೇಕಲ್ಲಾ.. ಪಕ್ಷದ ರಾಷ್ಟ್ರೀಯ ನಾಯಕರ ಬಳಿ ಮಾತನಾಡಿ, ಬಿಜೆಪಿ ಭದ್ರಕೋಟೆಗೆ ಮಂತ್ರಿಸ್ಥಾನ ಕೊಡಿಸಿ ಅಂತ ಫೋನ್ ಮೇಲೆ ಫೋನ್ ಮಾಡ್ತಾ ಇದ್ದಾರಂತೆ. ಇದೇ ಈಗ ನಳಿನ್ ಅವರಿಗೆ ದೊಡ್ಡ ತಲೆನೋವಾಗಿದೆ. ಕನಿಷ್ಠ ಒಂದು ಸಚಿವ ಸ್ಥಾನ ಕೊಡಿಸಿಲ್ಲಾಂದ್ರೆ ಕರಾವಳಿಯಲ್ಲಿ ನನಗೆ ಬೆಲೆ ಇರಲ್ಲ. ಏನು ಮಾಡೋದು ಅಂತ ಚಿಂತೆಯಲ್ಲಿದ್ದಾರೆ. ರಾಷ್ಟ್ರೀಯ ನಾಯಕರ ಬಳಿ ಈ ಬಗ್ಗೆ ಮಾತನಾಡಿ ಕನಿಷ್ಠ ಒಂದು ಸಚಿವ ಸ್ಥಾನ ಕೊಡಿಸುವ ಪ್ರಯತ್ನ ಮಾಡ್ತಿದ್ದಾರಂತೆ ನಳಿನ್ ಕುಮಾರ್ ಕಟೀಲ್.