ಮಂಗಳೂರು: ಮಸಾಜ್ ಪಾರ್ಲರ್ (Massage Parlor) ಮೇಲೆ ದಾಳಿ ನಡೆಸಿದ್ದ ಆರೋಪಿಗಳಿಗೆ ಮಂಗಳೂರು (Mangaluru) ಜೆಎಂಎಫ್‍ಸಿ 6ನೇ ಕೋರ್ಟ್ (Court) 14 ದಿನಗಳ ಕಾಲ (ಫೆ.7ರ ವರೆಗೆ) ನ್ಯಾಯಾಂಗ ಬಂಧನ ವಿಧಿಸಿದೆ.
ರಾಮ್ ಸೇನಾ (Ram Sena) ಸಂಸ್ಥಾಪಕ ಪ್ರಸಾದ್ ಅತ್ತಾವರ ಸೇರಿದಂತೆ 14 ಆರೋಪಿಗಳನ್ನು ಬರ್ಕೆ ಪೊಲೀಸರು ಇಂದು (ಶುಕ್ರವಾರ) ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಮಸಾಜ್ ಪಾರ್ಲರ್ ಮೇಲೆ ರಾಮ್ ಸೇನಾ ಕಾರ್ಯಕರ್ತರು ಗುರುವಾರ ದಾಳಿ ನಡೆಸಿದ್ದರು. ಈ ವೇಳೆ ಮಸಾಜ್ ಪಾರ್ಲರ್‌ನಲ್ಲಿ ಮೂವರು ಯುವತಿಯರು ಹಾಗೂ ಓರ್ವ ಯುವಕ ಇದ್ದರು. ಯುವಕನ ಮೇಲೆ ಕಾರ್ಯಕರ್ತರು ಹಲ್ಲೆ ನಡೆಸಿ, ಪೀಠೋಪಕರಣ ಧ್ವಂಸ ಮಾಡಿದ್ದರು.
ಈ ಸಂಬಂಧ ಸಂಘಟನೆಯ ಮುಖ್ಯಸ್ಥ ಪ್ರಸಾದ್ ಅತ್ತಾವರ ಸೇರಿದಂತೆ ಕಾರ್ಯಕರ್ತರಾದ ಹರ್ಷ ರಾಜ್, ಮೋಹನ್ ದಾಸ್, ಪುರಂದರ, ಸಚಿನ್, ರವೀಶ್, ಸುಕೇಶ್, ಅಂಕಿತ್, ಕಾಳಿ ಮುತ್ತು, ಅಭಿಲಾಷ್, ದೀಪಕ್, ವಿಘ್ನೇಶ್, ಶರಣ್ ರಾಜ್ ಮತ್ತು ಪ್ರದೀಪ್ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದರು.
ಆರೋಪಿಗಳ ವಿರುದ್ಧ ಬಿಎನ್‍ಎಸ್ ಆಕ್ಟ್ 329(2), 324(5), 74, 351(3), 115(2), 109, 352, 190 ಅಡಿ ಪ್ರಕರಣ ದಾಖಲಾಗಿದೆ.