ಚಿಕ್ಕಮಗಳೂರು: ವ್ಯಕ್ತಿಯೊಬ್ಬರು ಹೋಟೆಲ್ ಒಂದರಲ್ಲಿ ಊಟ ಮಾಡಿದ್ದಕ್ಕೆ 35 ವರ್ಷಗಳ ಬಳಿಕ ಬಿಲ್ ಪಾವತಿಸಿದ ಅಪರೂಪದ ಘಟನೆ ಮೂಡಿಗೆರೆ (Mudigere) ತಾಲೂಕಿನ ಕೊಟ್ಟಿಗೆಹಾರದಲ್ಲಿ ನಡೆದಿದೆ.
35 ವರ್ಷಗಳ ಹಿಂದೆ ಹೋಟೆಲ್ ಒಂದರಲ್ಲಿ ಊಟ ಮಾಡಿ ಬಿಲ್ ನೀಡದೆ ಮರೆತು ಹೋಗಿದ್ದ ವ್ಯಕ್ತಿಯೊಬ್ಬರು ಅದನ್ನು ಮರೆಯದೆ ಅದೇ ಹೋಟೆಲ್ ಹುಡುಕಿಕೊಂಡು ಬಂದು ತಾನು ಊಟ ಮಾಡಿದ್ದ ಬಿಲ್ ಪಾವತಿಸಿ ಪ್ರಮಾಣಿಕತೆ ಮೆರೆದಿದ್ದಾರೆ. ಮಂಗಳೂರಿನ ದೇರಲಕಟ್ಟೆ ನಿವಾಸಿ ಮೊಹಮದ್ ಎಂಬವರು 35 ವರ್ಷಗಳ ಹಿಂದೆ ಕೆಲಸದ ನಿಮಿತ್ತ ಮೂಡಿಗೆರೆಗೆ ಬಂದಿದ್ದರು. ಕೆಲಸದ ನಂತರ ಮಂಗಳೂರಿಗೆ (Mangaluru) ಹಿಂದಿರುಗುವಾಗ ಹೊಟ್ಟೆ ಹಸಿವಿದ್ದರಿಂದ ಕೊಟ್ಟಿಗೆಹಾರದ ಹಳೆಯ ಭಾರತ್ ಹೋಟೆಲ್‌ನಲ್ಲಿ ಕಡುಬು, ಮೀನು ಸಾರು ಊಟ ಮಾಡಿದ್ದರು. ಊಟ ಮಾಡಿದ್ದ ಬಳಿಕ ಬಿಲ್ ನೀಡಲು ಮರೆತಿದ್ದ ಅವರು ಬಸ್ ಹತ್ತಿ ಮಂಗಳೂರಿಗೆ ಹೋಗಿದ್ದರು.
ಬಸ್ ಹತ್ತಿದ ಬಳಿಕ ಅವರಿಗೆ ತಾನು ಕೊಟ್ಟಿಗೆಹಾರದಲ್ಲಿ ಊಟ ಮಾಡಿದ್ದ ಬಿಲ್ ನೀಡದಿರುವುದು ಅರಿವಾಗಿತ್ತು. ಈ ಬಗ್ಗೆ ಅವರಿಗೆ ಬೇಸರವೂ ಆಗಿತ್ತು. ಮತ್ತೆ ಕೊಟ್ಟಿಗೆಹಾರ ಹೋದಾಗ ಬಿಲ್ ನೀಡೋಣ ಎಂದುಕೊಂಡಿದ್ದರು. ಆದರೆ, ಅವರಿಗೆ ಕೊಟ್ಟಿಗೆಹಾರದ ಕಡೆ ಬರುವ ಸಂದರ್ಭವೇ ಬಂದಿರಲಿಲ್ಲ. ಆದ್ದರಿಂದ ಅವರು ಈ ಬಿಲ್ ವಿಚಾರ ಮರೆತಿದ್ದರು.
ಭಾನುವಾರ (ಫೆ.17) ಕೆಲಸದ ನಿಮಿತ್ತ ಕೊಟ್ಟಿಗೆಹಾರಕ್ಕೆ ಬಂದಿದ್ದ ಅವರು, ತಾನು 35 ವರ್ಷದ ಹಿಂದೆ ಊಟ ಮಾಡಿ ಬಿಲ್ ನೀಡದೆ ಹೋಗಿದ್ದ ವಿಚಾರ ನೆನಪಾಗಿ ಕೊಟ್ಟಿಗೆಹಾರದ ಭಾರತ್ ಹೊಟೇಲ್ ಹೋಗಿ ವಿಷಯ ತಿಳಿಸಿ ಬಿಲ್ ನೀಡಿದ್ದಾರೆ. ಈ ವೇಳೆ ಭಾರತ್ ಹೋಟೆಲ್ ಮಾಲೀಕರ ಮಗ ಅಬ್ದುಲ್ ಅಜೀದ್ ಎಂಬವರು ಅಲ್ಲಿದ್ದರು. ಅವರ ಬಳಿ ತನ್ನ ಬಿಲ್ ನ ವಿಚಾರ ಹೇಳಿದ್ದಲ್ಲದೆ, ಕ್ಷಮೆ ಕೂಡ ಕೇಳಿ, ಬಿಲ್ ಪಾವತಿ ಮಾಡಿ ಮತ್ತೆ ಅಲ್ಲೇ ಅದೇ ಕಡುಬು, ಮೀನು ಸಾರು ಊಟ ಮಾಡಿ ತೆರಳಿದ್ದಾರೆ.
ಮೊಹಮದ್ ಅವರು ಅನ್ನದ ಋಣ ಮರೆಯದೇ ದಶಕಗಳ ಬಳಿಕ ಬಿಲ್ ಪಾವತಿಸಿದ್ದಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.