ಮಂಗಳೂರು: ಹುಡುಗಿಯರನ್ನು ಚುಡಾಯಿಸಬೇಡಿ, ಇದು ಹಿಂದೂ ರಾಷ್ಟ್ರ ಎಂದು ತಿಳುವಳಿಕೆ ಹೇಳಿದ ಯುವಕನನ್ನು ಗುಂಪೊಂದು ಅಟ್ಟಾಡಿಸಿ ಹೊಡೆದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಫೋರಂ ಫಿಜಾ ಮಾಲ್‍ನಲ್ಲಿ ಘಟನೆ ನಡೆದಿದ್ದು, ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ.
ನಗರದ ಫೋರಂ ಫಿಜಾ ಮಾಲ್‍ಗೆ ಬಂದಿದ್ದ ಕಾಲೇಜಿನ ವಿದ್ಯಾರ್ಥಿಗಳು ಹುಡುಗಿಯರನ್ನು ಚುಡಾಯಿಸುತ್ತಿದ್ದರು. ಇದನ್ನು ನೋಡಿ ಯುವಕ, ಹೀಗೆ ಮಾಡುವುದು ಸರಿಯಲ್ಲ ಎಂದು ಬುದ್ಧಿ ಹೇಳಿದ್ದಾನೆ. ಇದರಿಂದ ಕೋಪಗೊಂಡ ವಿದ್ಯಾರ್ಥಿಗಳು ಏಕಾಏಕಿ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಯುವಕನನ್ನು ಸುತ್ತುವರಿದು, ಈಗ ಹೇಳು ನೋಡೋಣ ಎಂದು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ.
ವಿದ್ಯಾರ್ಥಿಗಳು ಸುತ್ತುವರಿದು ಭಯ ಮೂಡಿಸುತ್ತಿದ್ದಂತೆ ಯುವಕ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆದರೆ ಇದಕ್ಕೆ ಅವಕಾಶ ಕೊಡದ ಗುಂಪು ಹಿಡಿದು ಮತ್ತೆ ಥಳಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಗುಂಪಿನಲ್ಲಿದ್ದ ಯುವಕನೊಬ್ಬ ಈ ದೃಶ್ಯವನ್ನು ತನ್ನ ಮೊಬೈಲ್‍ನಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.
ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹಲ್ಲೆ ನಡೆಸಿದ ಯುವಕರಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.