– ಇತ್ತ ಯಾವುದೇ ಕ್ಷಣದಲ್ಲಿ ಕೆಆರ್ ಎಸ್ ನಿಂದ ನೀರು ಬಿಡಲು ಸಿದ್ಧತೆ
ಮಡಿಕೇರಿ/ಮಂಡ್ಯ: ಕೊಡಗಿನಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಭಾರೀ ಮಳೆಯಿಂದ ಇದೀಗ ಮಂಗಳೂರು- ಮಡಿಕೇರಿ ಸಂಪರ್ಕ ಕಲ್ಪಿಸುವ ಹೆದ್ದಾರಿ ಕುಸಿಯುವ ಭೀತಿಯಲ್ಲಿದೆ.
ಹೆದ್ದಾರಿ ಸಂಖ್ಯೆ 275ರಲ್ಲಿ ಈಗಾಗಲೇ ಬಿರುಕು ಕಾಣಿಸಿಕೊಂಡಿದ್ದು, ವಾಹನ ಸವಾರರು ಆತಂಕಕ್ಕೀಡಾಗಿದ್ದಾರೆ. ಮಳೆಯೊಂದಿಗೆ ಗಾಳಿಯೂ ಹೆಚ್ಚಾಗಿದೆ. ಕೊಡಗಿನಿಂದ ಮಂಗಳೂರಿಗೆ ಸಂಚಾರ ಕಲ್ಪಿಸುವ ಏಕೈಕ ರಸ್ತೆ ಇದಾಗಿದ್ದು, ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಇಂದು ಕೂಡ ರಜೆ ಘೋಷಿಸಲಾಗಿದೆ. ಇದನ್ನೂ ಓದಿ; ಭೋರ್ಗರೆದು ಹರಿಯುತ್ತಿರುವ ಕರ್ನಾಟಕದ ನಯಾಗರ ಫಾಲ್ಸ್
Advertisement
ಭಾಗಮಂಡಲ ಕ್ಷೇತ್ರ ಸಂಪೂರ್ಣ ಜಲಾವೃತವಾಗಿದೆ. ತ್ರಿವೇಣಿ ಸಂಗಮ, ಲಕ್ಷ್ಮಣ ತೀರ್ಥ ಉಕ್ಕಿ ಹರಿಯುತ್ತಿವೆ. ಹೀಗಾಗಿ ನೀರಿನ ಮಟ್ಟ ಏರಿಕೆಯಾಗಿದ್ದು ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಇನ್ನು ಕಳೆದ 4 ದಿನಗಳಿಂದ ಭಗಂಡೇಶ್ವರ ಕ್ಷೇತ್ರ ಜಲಾವೃತಗೊಂಡಿದೆ. ಭಾರೀ ಮಳೆಯಿಂದ ಹಾರಂಗಿ ಜಲಾಶಯದಲ್ಲಿಯೂ ನೀರಿನ ಮಟ್ಟ ಗಣನೀಯ ಏರಿಕೆಯಾಗಿದೆ. ಮಳೆಯ ಅರ್ಭಟಕ್ಕೆ ಫಾಲ್ಸ್ ಗಳು ಕೂಡ ಭೋರ್ಗರೆಯುತ್ತಿವೆ.
Advertisement
Advertisement
ಇತ್ತ ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯದ ಕೆಆರ್ ಎಸ್ ಜಲಾಶಯದಿಂದ ಯಾವುದೇ ಸಂದರ್ಭದಲ್ಲಿ ಹೆಚ್ಚುವರಿ ನೀರಿನ್ನು ಕಾವೇರಿ ನದಿಗೆ ಬಿಡಲು ಸಿದ್ಧತೆ ನಡೆಸಲಾಗಿದೆ. ನದಿಯ ಎರಡೂ ದಂಡೆಗಳಲ್ಲಿ ಸಾರ್ವಜನಿಕರು ಆಸ್ತಿ ಹಾಗೂ ಜಾನುವಾರು ಸುರಕ್ಷತೆ ಬಗ್ಗೆ ನಿಗಾವಹಿಸಲು ಕೆಆರ್‍ಎಸ್ ಕಾರ್ಯಪಾಲಕ ಇಂಜಿನಿಯರ್ ಬಸವರಾಜೇಗೌಡ ಮನವಿ ಮಾಡಿಕೊಂಡಿದ್ದಾರೆ.
Advertisement
124.80 ಅಡಿ ಗರಿಷ್ಟ ಮಟ್ಟ ಸಾಮಾರ್ಥ್ಯದ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ ಎಸ್ ಡ್ಯಾಂ ನಲ್ಲಿ ಭರ್ತಿಗೆ ಕೇವಲ 2 ಅಡಿಯಷ್ಟೆ ಬಾಕಿ ಉಳಿದಿದೆ. ಈಗಾಗಲೇ 122.70 ಅಡಿ ನೀರು ಸಂಗ್ರಹವಾಗಿದೆ. ಒಳ ಹರಿವು 41,961 ಕ್ಯೂಸೆಕ್ ಇದ್ದು, ಹೊರ ಹರಿವು 3,929 ಕ್ಯೂಸೆಕ್ ಇದೆ. ಒಟ್ಟು 46.56 ಟಿಎಂಸಿ ನೀರು ಸಂಗ್ರಹವಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ನಿಲ್ಲದ ಮಳೆ, ತಗ್ಗದ ಪ್ರವಾಹ – ಆಗುಂಬೆ ಸೂರ್ಯಾಸ್ತ ಗೋಪುರ ರಸ್ತೆ ಕುಸಿತ – KRS, ಹೇಮಾವತಿ ಇಂದು ಸಂಪೂರ್ಣ
ಕ್ಯೂಸೆಕ್ ಮತ್ತು ಟಿಎಂಸಿ ಎಂದರೆ ಎಷ್ಟು?
ಕ್ಯೂಸೆಕ್ ಎಂಬುದು Cubic feet per Second ಹ್ರಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.