ಪಾಕ್‌ ಪರ ಘೋಷಣೆ ಕೂಗಿದ್ದವನ ಹತ್ಯೆ ಕೇಸ್ – ಮೂವರು ಪೊಲೀಸರು ಸಸ್ಪೆಂಡ್

Public TV
2 Min Read
Mangaluru Mohammad Ashraf copy
ಗುಂಪು ದಾಳಿಯಲ್ಲಿ ಮೃತಪಟ್ಟ ಅಶ್ರಫ್‌

ಮಂಗಳೂರು: ಕುಡುಪು (Kudupu) ಬಳಿ ನಡೆದಿದ್ದ ಕೇರಳ (Kerala) ಮೂಲದ ಮುಸ್ಲಿಂ ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್‌ ಸೇರಿ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ.

ಕರ್ತವ್ಯ ಲೋಪ ಆರೋಪದಡಿ ಇನ್ಸ್‌ಪೆಕ್ಟರ್‌ ಶಿವಕುಮಾರ್, ಹೆಡ್ ಕಾನ್ಸ್‌ಟೇಬಲ್ ಚಂದ್ರ.ಪಿ ಮತ್ತು ಕಾನ್ಸ್‌ಟೇಬಲ್‌ ಯಲ್ಲಾಲಿಂಗ ಅವರನ್ನು ಅಮಾನತು ಮಾಡಲಾಗಿದೆ. ಮೂವರ ವಿರುದ್ಧ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದ ಆರೋಪ ಕೇಳಿ ಬಂದಿತ್ತು. ಇದನ್ನೂ ಓದಿ: ಕುಡುಪು ಕ್ರಿಕೆಟ್ ಮೈದಾನದಲ್ಲಿ ವ್ಯಕ್ತಿ ಕೊಲೆ ಕೇಸ್ – 20 ಆರೋಪಿಗಳು ಬಂಧನ

ಶಿವಕುಮಾರ್ ಆರಂಭದಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿದ್ದರು. ವಿವಾದ ದೊಡ್ಡದಾದ ಮೇಲೆ ಕೊಲೆ ಪ್ರಕರಣ ದಾಖಲಿಸಿದ್ದರು. ಇದಾದ ಬಳಿಕ ಶಿವಕುಮಾರ್ ಅವರನ್ನು ಅಮಾನತು ಮಾಡುವಂತೆ ಗೃಹ ಸಚಿವರಿಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪತ್ರ ಬರೆದಿದ್ದರು.

ಏನಿದು ಪ್ರಕರಣ?
ಏ.27ರ ಭಾನುವಾರ ಸಂಜೆ 5:30ರ ಸುಮಾರಿಗೆ ಮಂಗಳೂರಿನ (Manglauru) ಹೊರವಲಯದ ಕುಡುಪು ಭಟ್ರಕಲ್ಲುರ್ಟಿ ದೈವಸ್ಥಾನದ ಸಮೀಪ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ತಕ್ಷಣ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಅನುಮಾನಾಸ್ಪದ, ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿದ್ದರು. ಮೃತದೇಹದ ಮರಣೋತ್ತರ, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮೃತನ ಬೆನ್ನಿಗೆ ಬಲವಾದ ಹೊಡೆತ ಬಿದ್ದಿದೆ. ಗಂಭೀರ ಗಾಯಗೊಂಡ ಕಾರಣದಿಂದ ಉಂಟಾದ ರಕ್ತಸ್ರಾವದಿಂದ ಆತ ಸಾವನ್ನಪ್ಪಿದ್ದಾನೆ ಎನ್ನಲಾಗಿತ್ತು.

ಕೊಲೆಯಾಗಿದ್ದು ಯಾಕೆ?
ಏ.27ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಕುಡುಪು ಭಟ್ರಕಲ್ಲುರ್ಟಿ ದೈವಸ್ಥಾನದ ಬಳಿ ಮೈದಾನದಲ್ಲಿ ಕ್ರಿಕೆಟ್ (Cricket) ಪಂದ್ಯಾವಳಿ ನಡೆಯುತ್ತಿತ್ತು. ಈ ಸಂದರ್ಭ ವಿಚಾರವೊಂದಕ್ಕೆ ಮೃತ ವ್ಯಕ್ತಿಗೆ ಅಲ್ಲಿದ್ದ ಸಚಿನ್ ಎಂಬಾತನೊಂದಿಗೆ ವಾಗ್ವಾದ ನಡೆದಿತ್ತು. ಈ ಸಂದರ್ಭ ಸಚಿನ್ ಆತನಿಗೆ ಥಳಿಸಿದ್ದು, ಬಳಿಕ ಅಲ್ಲಿದ್ದ 25ರಿಂದ 30 ಮಂದಿಯ ಗುಂಪು ಅಪರಿಚಿತ ವ್ಯಕ್ತಿಗೆ ಕೈಯಿಂದ ಮತ್ತು ಕಟ್ಟಿಗೆಯಿಂದ ಹೊಡೆದು, ಕಾಲಿನಿಂದ ಯದ್ವಾತದ್ವ ತುಳಿದು ಹಲ್ಲೆ ನಡೆಸಿದ್ದರು. ಈ ಸಂದರ್ಭ ಕೆಲವರು ತಡೆಯಲು ಯತ್ನಿಸಿದರೂ, ಆತನ ಮೇಲೆ ನಿರಂತರ ಹಲ್ಲೆ ನಡೆಸಿದ ಕಾರಣ ಗಂಭೀರವಾಗಿ ಗಾಯಗೊಂಡು ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದರು.‌

ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನಿವಾಸಿ ದೀಪಕ್ ಕುಮಾರ್ ಎಂಬುವವರು 19 ಮಂದಿ ಮತ್ತು ಇತರರ ವಿರುದ್ಧ ನೀಡಿದ ದೂರಿನ ಆಧಾರದಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 37/2025, ಕಲಂ: 103(2), 115(2), 189(2), 190, 191(1), 191(3), 240 ಕಾಯ್ದೆಯಡಿ ಕೇಸ್ ದಾಖಲಾಗಿತ್ತು. ಪ್ರಕರಣ ಸಂಬಂಧ 20 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ವೇಳೆ ಮೃತಪಟ್ಟ ಯುವಕ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಕ್ಕೆ ಹಲ್ಲೆ ನಡೆಸಿದ್ದಾಗಿ ಆರೋಪಿಗಳು ತಿಳಿಸಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಹೇಳಿದ್ದರು. ಇದನ್ನೂ ಓದಿ: ಕುಡುಪು ಗುಂಪು ಹತ್ಯೆ ಪ್ರಕರಣ; ಸಿಐಡಿ ತನಿಖೆಗೆ ಕೆಪಿಸಿಸಿ ಪ್ರ.ಕಾರ್ಯದರ್ಶಿ ಇನಾಯತ್ ಅಲಿ ಆಗ್ರಹ

Share This Article