– ಶ್ರೀಗಳ ಮೊದಲ ಪುಟ್ಟ ಹೆಜ್ಜೆ ಮಠ
ಮಂಗಳೂರು: ರಾಷ್ಟ್ರ ಕಂಡ ಶ್ರೇಷ್ಠ ಸಂತ ಪೇಜಾವರ ಶ್ರೀಗಳು ಕೃಷ್ಣೈಕ್ಯದ್ದಾರೆ. ವಿಶ್ವೇಶತೀರ್ಥ ಸ್ವಾಮೀಜಿ ಪೇಜಾವರ ಶ್ರೀಗಳು ಎಂದು ಪ್ರಸಿದ್ಧವಾಗಲು ಕಾರಣ ಮಂಗಳೂರಿನ ಕೆಂಜಾರು ಗ್ರಾಮದಲ್ಲಿರುವ ಮೂಲಮಠ.
ಪೇಜಾವರ ಅಧೋಕ್ಷಜ ಮಠದ 32ನೇ ಯತಿ ವಿಶ್ವೇಶತೀರ್ಥ ಸ್ವಾಮೀಜಿ ಕೃಷ್ಣೈಕ್ಯರಾಗಿದ್ದಾರೆ. ಪೊಡವಿಗೊಡೆಯನನಾಡು ಸೂತಕದ ಛಾಯೆಯಲ್ಲಿ ಮುಳುಗಿ ಹೋಗಿದೆ. ವಿಶ್ವೇಶತೀರ್ಥರು ತನ್ನ ಏಳೂವರೆ ವರ್ಷದ ಪ್ರಾಯದಲ್ಲೇ ಆಧ್ಯಾತ್ಮದ ಅನುಭೂತಿ ಪಡೆದು ಸನ್ಯಾಸತ್ವ ಸ್ವೀಕರಿದರು. ಹಂಪಿಯಲ್ಲಿ ಸನ್ಯಾಸತ್ವ ಸ್ವೀಕರಿಸಿದ ಶ್ರೀಗಳು ಮುಂದೆ ತಮ್ಮ ಸಂಸ್ಕೃತ ವಿದ್ಯಾಭ್ಯಾಸ ಕಲಿತದ್ದು ಮಂಗಳೂರಿನ ಕೆಂಜಾರು ಗ್ರಾಮದಲ್ಲಿರುವ ಪೇಜಾವರ ಎಂಬ ಊರಿನ ಮಠದಲ್ಲಿ. ಏಳೂವರೆ ವರ್ಷದ ವೆಂಕಟರಮಣ ಎಂಬ ಹುಡುಗ ವಿಶ್ವೇಶತೀರ್ಥರಾಗಿ ಬದಲಾಗಿದ್ದು ಇದೇ ಸ್ಥಳದಲ್ಲಿ.
Advertisement
Advertisement
ವಿಶ್ವೇಶತೀರ್ಥರು ಪೇಜಾವರ ಶ್ರೀ ಎಂದು ಇಂದು ಪ್ರಸಿದ್ಧಿಯಾಗಲು ಕಾರಣ ಈ ಮಠ. ಸುಮಾರು 800 ವರ್ಷಗಳ ಇತಿಹಾಸವಿರುವ ಈ ಪೇಜಾವರ ಮಠದಲ್ಲಿ ಮೂರು ವರ್ಷಗಳ ಕಾಲ ಸ್ವಾಮೀಜಿ ವಿದ್ಯಾಭ್ಯಾಸ ಮಾಡಿದ್ದಾರೆ. ಪೇಜಾವರ ಸ್ವಾಮೀಜಿಗಳ ಅಪಾರ ಜ್ಞಾನ ಸಂಪತ್ತಿಗೆ ಮೂಲ ಬುನಾದಿ ಈ ಪೇಜಾವರ ಮಠವಾಗಿದೆ.
Advertisement
ಪ್ರತಿ ವರ್ಷ ಹನುಮ ಜಯಂತಿಯನ್ನು ಈ ಮೂಲ ಮಠದಲ್ಲೇ ಕಳೆಯುವ ಶ್ರೀಗಳು ಮಠಕ್ಕೆ ಬಂದಾಕ್ಷಣ ಮಗು ಮನಸ್ಸಿನವರಾಗುತ್ತಿದ್ದರು. ತಮ್ಮ ಬಾಲ್ಯದ ಸುಂದರ ಕ್ಷಣಗಳನ್ನು ನೆನಪು ಹಾಕಿಕೊಳ್ಳುತ್ತಿದ್ದರು. ಮಧ್ವಾಚಾರ್ಯಾರು, ವಾದಿರಾಜರು ಬಂದು ನೆಲೆಸಿದ ಈ ಮಠದಲ್ಲಿ ಮುಖ್ಯ ಪ್ರಾಣ ಮತ್ತು ಪಟ್ಟದ ದೇವರನ್ನು ಆರಾಧಿಸಲಾಗುತ್ತದೆ. ಅದರಲ್ಲೂ ಕೃಷ್ಣ ಭಕ್ತರಾದ ಪೇಜಾವರ ಶ್ರೀಗಳು ಮೂಲಮಠದಲ್ಲಿರುವ ರಾಮನನ್ನು ಬಹಳ ಮೆಚ್ಚುತ್ತಿದ್ದರು. ರಾಮನ ಮಂದಸ್ಮಿತ ಮೂರ್ತಿಯನ್ನು ಬಹಳ ನೆಚ್ಚಿಕೊಂಡಿದ್ದರು ಎಂದು ಮೂಲ ಮಠದ ಅರ್ಚಕರಾದ ಗಿರೀಶ್ ಭಟ್ ಹೇಳಿದ್ದಾರೆ.
Advertisement
ಪೇಜಾವರ ಶ್ರೀಗಳು ಪ್ರಪಂಚ ಪರ್ಯಟನೆ ಮಾಡಿದರೂ ನೆಚ್ಚಿನ ಸ್ಥಳ ಈ ಮೂಲ ಮಠವಾಗಿದೆ. ತಾವು ವಿದ್ಯಾಭ್ಯಾಸ ಮಾಡಿದ ಊರಿನಲ್ಲಿ ಪಾಠಶಾಲೆ ತೆರೆಯುವುದು ಶ್ರೀಗಳ ಕನಸಾಗಿತ್ತು. ಈ ಬಗ್ಗೆ ಸರ್ಕಾರದ ಗಮನವನ್ನು ಸೆಳೆದಿದ್ದರು. ಡಿಸೆಂಬರ್1 ಮತ್ತು 2ರಂದು ಮಠಕ್ಕೆ ಬಂದಿದ್ದ ಶ್ರೀಗಳು ಮಠವನ್ನು ಅಭಿವೃದ್ಧಿಗೊಳಿಸುವ ಕನಸನ್ನು ಹೊತ್ತಿದ್ದರು. ಪಾಠಶಾಲೆಯ ಸಂಚಾಲಕರಾದ ಸುಂದರ್ ಭಟ್ ಅವರಲ್ಲಿ ಈ ಬಗ್ಗೆ ಶ್ರೀಗಳು ಹೇಳಿಕೊಂಡಿದ್ದರು. ಜೊತೆಗೆ ಡಿಸೆಂಬರ್ 21ರಂದು ಮತ್ತೆ ಬರುತ್ತೇನೆ ಮೀಟಿಂಗ್ ಮಾಡೋಣ ಎಂದಿದ್ದರಂತೆ.
ಆದರೆ ಆ ದಿನ ಆಸ್ಪತ್ರೆಯ ಹಾಸಿಗೆಯಲ್ಲಿ ಪೇಜಾವರ ಶ್ರೀಗಳು ಜೀವನ್ಮರಣದ ಹೋರಾಟ ಆರಂಭಿಸಿದ್ದರು. ಏನೇ ಇರಲಿ ಪೇಜಾವರ ಶ್ರೀಗಳು ಕೃಷ್ಣೈಕ್ಯರಾದರೂ ಅವರ ನೆನಪುಗಳು ಮಾತ್ರ ಅಜರಾಮರವಾಗಿದೆ. ಬಾಲಕನಾಗಿದ್ದಾಗ ಪೇಜಾವರ ಶ್ರೀಗಳ ಪುಟಾಣಿ ಕಾಲುಗಳು ಓಡಾಡಿದ ಈ ಜಾಗ ನಿರ್ವಾತವಾಗಿದೆ.