– ಸಿಎಂ ಯಡಿಯೂರಪ್ಪರಿಂದ ಸನ್ಮಾನ
– ಟ್ರ್ಯಾಕ್‍ನಲ್ಲಿ ಓಡಲ್ಲ, ಕಂಬಳದಲ್ಲೇ ಸಾಧನೆ
ಮಂಗಳೂರು: ಕರಾವಳಿಯಲ್ಲಿ ಈಗ ವಿಶ್ವದ ಅತೀ ವೇಗದ ಓಟಗಾರ ಉಸೇನ್ ಬೋಲ್ಟ್ ದಾಖಲೆ ಸರಿಗಟ್ಟಿದ ಕಂಬಳ ಓಟಗಾರ ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡರದ್ದೇ ಹವಾ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಪೆರ್ಮುಡದಲ್ಲಿ ನಡೆದ ಸೂರ್ಯ ಚಂದ್ರ ಕಂಬಳದಲ್ಲಿ ಮೂರು ಚಿನ್ನವನ್ನು ಉಡಾಯಿಸಿದ ಶ್ರೀನಿವಾಸ್ ಭಾನುವಾರ ಕಮಾಲ್ ಮಾಡಿದರು.
Advertisement
ಎರಡು ದಿನಗಳ ಕಾಲ ನಡೆದ ಹೊನಲು ಬೆಳಕಿನ ಕಂಬಳದಲ್ಲಿ ಶ್ರೀನಿವಾಸನ ಓಟ ನೋಡಲೆಂದೇ ಕಂಬಳ ಅಭಿಮಾನಿಗಳು ಆಗಮಿಸಿದರು. ಅದಕ್ಕೆ ಕಾರಣ ಶ್ರೀನಿವಾಸ ಗೌಡ ಉಸೇನ್ ಬೋಲ್ಟ್ ವೇಗವನ್ನ ಹಿಂದಿಕ್ಕಿ ಪ್ರಸಿದ್ಧಿಯಾದ ಬಳಿಕ ಆಡುತ್ತಿರುವ ಮೊದಲನೇ ಕಂಬಳ. ಓಟದ ಬ್ರೇಕ್ ಸಿಕ್ಕಾಗ ಸಿನಿಮಾ ನಟರ ಜೊತೆ ಸೆಲ್ಪಿ ತೆಗೆಸಿಕೊಳ್ಳುವಂತೆ ಜನ ಮುಗಿಬಿದ್ದಿದ್ರು. ಶ್ರೀನಿವಾಸ ನಾಚುತ್ತಲೇ ಸೆಲ್ಫಿಗೆ ಪೋಸ್ ನೀಡುತ್ತಿದ್ರು. ಈ ಮಧ್ಯೆ ಕರಾವಳಿ ಉಸೇನ್ ಬೋಲ್ಟ್ ಶ್ರೀನಿವಾಸ ಗೌಡ ಕೋಣಗಳನ್ನು ಮಿಂಚಿನ ವೇಗದಲ್ಲಿ ಓಡಾಡಿಸುತ್ತಿದ್ರೆ ಶಿಳ್ಳೆ, ಚಪ್ಪಾಳೆಗಳ ಅಬ್ಬರವೇ ತುಂಬಿ ಹೋಗುತ್ತಿತ್ತು. ಹೀಗಿರೋವಾಗಲೇ ಆಟದ ಕಣಕ್ಕೆ ಎಂಟ್ರಿ ಕೊಟ್ಟ ಶ್ರೀನಿವಾಸ್ ಭರ್ಜರಿಯಾಗಿ ಓಡಿ ಎಲ್ಲರನ್ನು ರಂಜಿಸಿದ್ರು. ಇದನ್ನೂ ಓದಿ: ಕಂಬಳ ವೀರ ಶ್ರೀನಿವಾಸ್‍ಗೌಡಗೆ ಕಾರ್ಮಿಕ ಇಲಾಖೆಯಿಂದ ಸೌಲಭ್ಯ
Advertisement
Advertisement
ಶ್ರೀನಿವಾಸ್ ಗೌಡ ಅವರ ಈ ರೀತಿಯ ಮಿಂಚಿನ ಓಟದಿಂದಲೇ ವಿಶ್ವದ ಗಮನವನ್ನು ತನ್ನತ್ತ ಸೆಳೆದಿದ್ದಾರೆ. ಹೀಗಾಗಿ ಕೇಂದ್ರ, ರಾಜ್ಯ ಸರ್ಕಾರಗಳೂ ಅವರ ಸಾಧನೆಯನ್ನು ಗುರುತಿಸಿದೆ. ಇಂದು ಮಧ್ಯಾಹ್ನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಶ್ರೀನಿವಾಸ ಗೌಡ ಅವರಿಗೆ ಸನ್ಮಾನ ನಡೆಸಲಿದ್ದಾರೆ. ಶ್ರೀನಿವಾಸ್ ಅವರು ಕಟ್ಟಡ ಕಾರ್ಮಿಕರಾಗಿರೋದ್ರಿಂದ ಕಾರ್ಮಿಕ ಮತ್ತು ಕ್ರೀಡಾ ಇಲಾಖೆಗಳು ಜಂಟಿಯಾಗಿ ಸನ್ಮಾನ ಏರ್ಪಡಿಸಿಕೊಂಡಿದ್ದು ಎರಡು ಇಲಾಖೆಯ ಸಚಿವರುಗಳು ಭಾಗವಹಿಸಿಲಿದ್ದಾರೆ.
Advertisement
ದೆಹಲಿಗೆ ಹೋಗಿ ಕೇಂದ್ರ ಕ್ರೀಡಾ ಸಚಿವರ ಅನ್ನು ಭೇಟಿಯಾಗುವ ಬಗ್ಗೆ ಕೂಡ ಇಂದು ಚರ್ಚೆಯಾಗಲಿದೆ. ಆದರೆ ತನಗೆ ಟ್ರ್ಯಾಕ್ ನಲ್ಲಿ ಓಡಲು ಸಾಧ್ಯವಿಲ್ಲ, ನಾನೇನಿದ್ದರೂ ಕಂಬಳ ಗದ್ದೆಯಲ್ಲೇ ಕೋಣಗಳ ಜೊತೆ ಓಡುವವನು. ಹೀಗಾಗಿ ಮುಂದೆಯೂ ಕಂಬಳದಲ್ಲೇ ಸಾಧನೆ ಮಾಡಬೇಕೆಂದುಕೊಂಡಿದ್ದೇನೆ ಎಂದು ವಿನಯದಿಂದಲೇ ಶ್ರೀನಿವಾಸ ಗೌಡ ಹೇಳುತ್ತಾರೆ. ಇದನ್ನೂ ಓದಿ: ಕರಾವಳಿಯ ಕಂಬಳ ಓಟಗಾರ ದೇಶಾದ್ಯಂತ ಟ್ರೆಂಡಿಂಗ್- ಕೇಂದ್ರವನ್ನೂ ತಲುಪಿದ ಸಾಧನೆ
ಶ್ರೀನಿವಾಸ ಗೌಡ ಕಂಬಳದ ಚಿನ್ನದ ಮಗ:
28 ವರ್ಷ ವಯಸ್ಸಿನ ಶ್ರೀನಿವಾಸ್ ಗೌಡ ಅವರು ತನ್ನ 18ನೇ ವಯಸ್ಸಿನಲ್ಲಿ ಕಂಬಳದ ಓಟಗಾರನಾಗಬೇಕೆಂದು ಬಂದಿದ್ದು, ಅಂದಿನಿಂದ ನಿಷ್ಠೆಯಿಂದ ಕಂಬಳವನ್ನು ಮೈಗೂಡಿಸಿಕೊಂಡಿದ್ದಾರೆ. ಹೀಗಾಗಿ ಅವರು ಓಡಿಸುವ ಕೋಣಗಳ ಮಾಲಕರಿಗೂ ಶ್ರೀನಿವಾಸ ಎಂದರೆ ಅಚ್ಚುಮೆಚ್ಚು. ಆತ ಕಂಬಳದ ಚಿನ್ನದ ಮಗನಾಗಿರೋದ್ರಿಂದ ಕಂಬಳದಲ್ಲೇ ಮುಂದುವರಿದರೆ ಒಳ್ಳೆಯದು. ಜೊತೆಗೆ ಇನ್ನೂ ಎತ್ತರಕ್ಕೆ ಏರಿ ದೇಶಕ್ಕೆ ಹೆಸರು ತರೋದಾದ್ರೂ ಹೆಮ್ಮೆಯ ವಿಚಾರ ಎಂದು ಶ್ರೀನಿವಾಸ ಓಡಿಸುವ ಕಂಬಳ ಕೋಣದ ಮಾಲಕ ಹರ್ಷವರ್ಧನ್ ಪಡಿವಾಳ್ ಹಾಗೂ ಇರುವೈಲು ಪಣಿಲ ಬಾಡು ಪೂಜಾರಿ ಹೇಳಿದ್ದಾರೆ.
ಮನೆ ಬಾಗಿಲಿಗೆ ಬಂದ ಅಧಿಕಾರಿಗಳು:
ಶ್ರೀನಿವಾಸ್ ಗೌಡ ಒಬ್ಬ ಕಟ್ಟಡ ನಿರ್ಮಾಣ ಕಾರ್ಮಿಕ. ಹೀಗಾಗಿ ಕಾರ್ಮಿಕರ ಸ್ಮಾರ್ಟ್ ಕಾರ್ಡ್ ಗಾಗಿ ಅವರ ಮನೆಗೆ ನಿನ್ನೆ ಕಾರ್ಮಿಕ ಇಲಾಖೆ ಅಧಿಕಾರಿಗಳು ತೆರಳಿ ದಾಖಲೆಗಳನ್ನು ಪಡೆದುಕೊಂಡರು. ಇಲಾಖೆಯಿಂದ ಸಿಗಬೇಕಾದ ಸವಲತ್ತಿನ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಸದ್ಯ ದೇಶವೇ ಈಗ ಶ್ರೀನಿವಾಸ ಗೌಡರ ಕಡೆ ನೋಡುತ್ತಿದ್ದು ಸಿಂಥೆಟಿಕ್ ಟ್ರ್ಯಾಕ್ ನಲ್ಲಿ ಓಡುತ್ತಾರಾ ಇಲ್ವಾ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ. ಒಟ್ಟಿನಲ್ಲಿ ಶ್ರೀನಿವಾಸ ಗೌಡರ ಸಾಧನೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಲಿ ಅನ್ನೋದೇ ಎಲ್ಲರ ಆಶಯವಾಗಿದೆ.