ಮಂಗಳೂರು: ಕಂಬಳ ಕರಾವಳಿಯ ಜಾನಪದ ಕ್ರೀಡೆಯಾಗಿದ್ದು, ಕರಾವಳಿಯಲ್ಲಿರುವಷ್ಟು ಕಂಬಳದ ಕ್ರೇಜ್ ಬೇರೆಲ್ಲೂ ಕಾಣಸಿಗದು. ಆದರೆ ನಗರ ಬೆಳೆಯುತ್ತಿದ್ದಂತೆ ಕಂಬಳದಂತಹ ಹಳ್ಳಿ ಸೊಗಡಿನ ಆಚರಣೆಗಳು ನಗರ ಪ್ರದೇಶದ ಜನತೆಯಿಂದ ದೂರವಾಗಿತ್ತು. ಆದರೆ ಈಗ ಅಂತಹ ಭಾವನೆಯನ್ನು ದೂರ ಮಾಡುವ ಯತ್ನ ಮಂಗಳೂರಿನಲ್ಲಿ ನಡೆಯುತ್ತಿದೆ.
ನಗರದ ಜನರಿಗೂ ತುಳುನಾಡಿನ ಜಾನಪದ ಕ್ರೀಡೆಯಾದ ಕಂಬಳದ ಬಗ್ಗೆ ಅರಿವು ಮೂಡಿಸಲು, ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸಲು ಮಂಗಳೂರು ನಗರದ ಕುಳೂರು ಬಳಿಯ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಕಂಬಳ ಏರ್ಪಡಿಸಲಾಗಿತ್ತು. ಕೃತಕವಾಗಿ ರೂಪಿಸಿದ ಕಂಬಳದ ಕರೆಯಲ್ಲಿ ಓಟದ ಕೋಣಗಳು ಜನರಲ್ಲಿ ಆಟದ ರಂಗನ್ನು ಮೂಡಿಸಿದ್ದವು.
Advertisement
Advertisement
ಸಾಮಾನ್ಯವಾಗಿ ಕಂಬಳ ಹಳ್ಳಿಗಳಲ್ಲಿ ಮಾತ್ರ ನಡೆಯುತ್ತೆ ಎನ್ನುವಂತಿತ್ತು. ಆದರೆ ಕಳೆದ ಮೂರು ವರ್ಷಗಳಿಂದ ನಗರದಲ್ಲಿ ರಾಮ-ಲಕ್ಷ್ಮಣ ಮಂಗಳೂರು ಕಂಬಳೋತ್ಸವ ನಡೆಸಲಾಗುತ್ತಿದೆ. ಕ್ಯಾಪ್ಟನ್ ಬೃಜೇಶ್ ಚೌಟ ನೇತ್ರತ್ವದಲ್ಲಿ ಕಂಬಳ ನಡೆದಿದ್ದು, ಮಣ್ಣಿನ ಆಟವನ್ನು ನೋಡಿ ನಗರದ ಜನ ಸಂಭ್ರಮ ಪಡುವಂತೆ ಕಂಬಳವನ್ನು ಆಯೋಜಿಸಲಾಗಿತ್ತು.
Advertisement
ಈ ಕಂಬಳ ಯಾವುದೇ ಕ್ರಿಕೆಟ್ ಆಟಕ್ಕೆ ಕಡಿಮೆ ಇಲ್ಲ. ಕ್ರಿಕೆಟ್‍ನಲ್ಲಿ ಕ್ರೀಡಾಪಟುಗಳೇ ಪ್ರಮುಖ ಆಕರ್ಷಣೆಯಾದರೆ, ಇಲ್ಲಿ ಮೂಕ ಪ್ರಾಣಿ ಕೋಣಗಳೇ ಪ್ರಮುಖ ಆಕರ್ಷಣೆ. ಪ್ರತೀ ಕೋಣದ ಮೇಲೂ ಸಾವಿರಾರು ರೂಪಾಯಿ ಬಾಜಿ ಕಟ್ಟುವ ಕಂಬಳ ಪ್ರೇಮಿಗಳು, ಕ್ರಿಕೆಟ್‍ನಂತೆ ಇಲ್ಲಿಯೂ ಕೂಡಾ ಮೂರನೇ ಅಂಪೈರ್, ವೀಕ್ಷಕ ವಿವರಣೆ, ನುರಿತ ತೀರ್ಪುಗಾರರು ಇರುತ್ತಾರೆ. ಮೂಕ ಪ್ರಾಣಿಗಳನ್ನು ಪಳಗಿಸಿ ಶಿಸ್ತಿಗೆ ಒಡ್ಡಿಕೊಳ್ಳುವ ರೀತಿಯೇ ಆಧುನಿಕತೆಯ ನಡುವೆಯೂ ಕೃಷಿಕರ ಪಾಲಿನ ಕಂಬಳ ಮನೋರಂಜನೆಯಾಗಿದೆ. ಅದಕ್ಕೂ ಮಿಗಿಲಾಗಿ ಪ್ರತಿಷ್ಟೆಯ ಕ್ರೀಡೆಯಾಗಿ ಕಂಬಳ ದಿನದಿಂದ ದಿನಕ್ಕೆ ಜನಪ್ರಿಯಗೊಳ್ಳುತ್ತಿದೆ. ಒಟ್ಟಿನಲ್ಲಿ ನಗರ ಭಾಗದಲ್ಲೂ ಈ ಕರಾವಳಿಯ ಜಾನಪದ ಕ್ರೀಡೆಯನ್ನು ಆಯೋಜಿಸುತ್ತಾ ಬಂದಿರುವುದು ನಿಜಕ್ಕೂ ಶ್ಲಾಘನೀಯ.