– ಮುಸ್ಲಿಂ ಸೆಂಟ್ರಲ್ ಕಮಿಟಿ ನಿರ್ಧಾರ
ಮಂಗಳೂರು: ಪೌರತ್ವ ಕಾಯ್ದೆ ವಿರೋಧಿಸಿ ಜನವರಿ 4ರಂದು ನಿಗದಿಯಾಗಿದ್ದ ಪ್ರತಿಭಟನೆಯನ್ನು ಮುಸ್ಲಿಂ ಸೆಂಟ್ರಲ್ ಕಮಿಟಿ ರದ್ದುಗೊಳಿಸಿ ನಿರ್ಧಾರ ಪ್ರಕಟಿಸಿದೆ.
ಪೌರತ್ವ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಕಳೆದ ಡಿಸೆಂಬರ್ 19ರಂದು ನಡೆದಿದ್ದ ಪ್ರತಿಭಟನೆ ಹಿಂಸಾಚಾರ ರೂಪ ಪಡೆದು ಬಳಿಕ ಗೋಲಿಬಾರ್ ನಡೆದು ಇಬ್ಬರು ಸಾವನ್ನಪ್ಪಿದ್ದರು. ಈ ಘಟನೆಯ ಬಳಿಕ ಪೌರತ್ವ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟಿಸಲು ಮುಸ್ಲಿಂ ಸೆಂಟ್ರಲ್ ಕಮಿಟಿ ನೇತೃತ್ವದಲ್ಲಿ ಪ್ರತಿಭಟನಾ ಸಭೆ ಆಯೋಜನೆಗೊಂಡಿದ್ದರೂ, ಸೆಕ್ಷನ್ ಇರುವ ಹಿನ್ನಲೆಯಲ್ಲಿ ಸಾಧ್ಯವಾಗಿಲ್ಲ. ಹೀಗಾಗಿ ಜನವರಿ 4ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ಸುಮಾರು ಒಂದು ಲಕ್ಷ ಜನರನ್ನು ಸೇರಿಸಿ ಬೃಹತ್ ಪ್ರತಿಭಟನಾ ಸಭೆ ನಡೆಸಲು ಪೊಲೀಸರಲ್ಲಿ ಮುಸ್ಲಿಂ ಸೆಂಟ್ರಲ್ ಕಮಿಟಿ ಅನುಮತಿ ಕೇಳಿತ್ತು.
Advertisement
Advertisement
ಭದ್ರತೆಯ ದೃಷ್ಟಿಯಿಂದ ನೆಹರೂ ಮೈದಾನದಲ್ಲಿ ಪ್ರತಿಭಟನೆ ನಡೆಸಲು ಪೊಲೀಸ್ ಕಮೀಷನರ್ ಅನುಮತಿ ನಿರಾಕರಿಸಿದ್ದು, ನಗರದಿಂದ ಹೊರಗೆ ಎಲ್ಲಿ ಬೇಕಿದರೂ ಅನುಮತಿ ನೀಡುವುದಾಗಿ ಹೇಳಿದ್ದರು. ಆದರೆ ಮುಸ್ಲಿಂ ಸೆಂಟ್ರಲ್ ಕಮಿಟಿ ಪ್ರತಿಭಟನೆ ನಡೆಸುವುದಾದರೆ ನಗರದ ನೆಹರೂ ಮೈದಾನದಲ್ಲೇ. ಹೀಗಾಗಿ ಅನುಮತಿ ನೀಡಬೇಕೆಂದು ಪಟ್ಟು ಹಿಡಿದಿರುವುದರಿಂದ ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್ ಹರ್ಷ ಸದ್ಯದ ಮಟ್ಟಿಗೆ ನೆಹರೂ ಮೈದಾನದಲ್ಲಿ ಪ್ರತಿಭಟಿಸಲು ಅನುಮತಿ ನೀಡುವುದಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ 28 ಮುಸ್ಲಿಂ ಸಂಘಟನೆಗಳನ್ನು ಹೊಂದಿರುವ ದಕ್ಷಿಣ ಕನ್ನಡ- ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿ ಪತ್ರಿಕಾಗೋಷ್ಠಿ ನಡೆಸಿ ಪೊಲೀಸ್ ಅನುಮತಿ ನೀಡದ ಹಿನ್ನೆಲೆಯಲ್ಲಿ ಜನವರಿ 4ರಂದು ನಡೆಯಬೇಕಿದ್ದ ಬೃಹತ್ ಪ್ರತಿಭಟನಾ ಸಭೆಯನ್ನು ರದ್ದುಗೊಳಿಸಿದೆ.
Advertisement
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ.ಎಸ್.ಮಹಮ್ಮದ್ ಮಸೂದ್ ಅವರು, ಮುಂದಿನ ದಿನದಲ್ಲಿ ಮತ್ತೆ ಅನುಮತಿ ಪಡೆದು ನೆಹರೂ ಮೈದಾನದಲ್ಲೇ ಬೃಹತ್ ಪ್ರತಿಭಟನೆ ನಡೆಸುತ್ತೇವೆ. ನಮ್ಮ ಸಂವಿಧಾನಾತ್ಮಕ ಹಕ್ಕಿನಂತೆ ನಮಗೆ ಬೇಕಾದ ಸ್ಥಳದಲ್ಲೇ ಪ್ರತಿಭಟನೆ ಮಾಡುತ್ತೇವೆ ಪೊಲೀಸರು ಯಾವಾಗ ಅನುಮತಿ ನೀಡುತ್ತಾರೋ ಅಂದೇ ಬೃಹತ್ ಪ್ರತಿಭಟನೆಯನ್ನು ಎಲ್ಲಾ ಮುಸ್ಲಿಂ ಸಂಘಟನೆಗಳು ಸೇರಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ಹಿಂಸಾಚಾರ, ಗೋಲಿಬಾರ್ ಇದೇ ನೆಹರೂ ಮೈದಾನದ ಪಕ್ಕದಲ್ಲೇ ನಡೆದಿರುವುದು ಹಾಗೂ ಪೊಲೀಸ್ ಆಯುಕ್ತರ ಹಾಗೂ ಜಿಲ್ಲಾಧಿಕಾರಿ ಕಚೇರಿ ನೆಹರೂ ಮೈದಾನದ ಮುಂಭಾಗದಲ್ಲೇ ಇರುವುದರಿಂದ ಪೊಲೀಸರು ಭದ್ರತಾ ದೃಷ್ಟಿಯಿಂದ ಜನವರಿ 4ರ ಪ್ರತಿಭಟನೆಗೆ ನೆಹರೂ ಮೈದಾನದಲ್ಲಿ ಅನುಮತಿ ನೀಡಿಲ್ಲ.