ಮಂಗಳೂರು: ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಈರುಳ್ಳಿ ಬೆಲೆ ಹೆಚ್ಚುತ್ತಿದ್ದು, ಪೂರೈಕೆ ಇಲ್ಲದಿರುವುದರಿಂದ ಬೇಡಿಕೆ ಹೆಚ್ಚಾಗಿದೆ. ಇದೀಗ ಈರುಳ್ಳಿ ಕೊರತೆಯನ್ನು ನೀಗಿಸುವುದಕ್ಕೆ ಕಡಲ ನಗರಿ ಮಂಗಳೂರಿಗೆ ಟರ್ಕಿ ದೇಶದ ಈರುಳ್ಳಿಯನ್ನು ಆಮದು ಮಾಡಲಾಗಿದೆ.
ಟರ್ಕಿ ಮೂಲದ ಈರುಳ್ಳಿ ಈಗಾಗಲೇ ಮಂಗಳೂರು ಮಾರುಕಟ್ಟೆಗೆ ಆಗಮಿಸಿದ್ದು ಬೆಲೆ ಕೆ.ಜಿಗೆ 130 ರಿಂದ 140 ರೂ.ನಂತೆ ಮಾರಾಟವಾಗುತ್ತಿದೆ. ಗಾತ್ರದಲ್ಲಿ ದೊಡ್ಡದಾಗಿದ್ದು, ಕೆಜಿ ಗೆ 3 ರಿಂದ 4 ಈರುಳ್ಳಿ ಮಾತ್ರ ತೂಗುತ್ತಿದೆ.
Advertisement
Advertisement
ಕೇಂದ್ರ ಸರ್ಕಾರ ಟರ್ಕಿಯಿಂದ 11 ಸಾವಿರ ಟನ್ ಈರುಳ್ಳಿ ಆಮದು ಮಾಡಿದ್ದು, ಹಡಗಿನ ಮೂಲಕ ಮುಂಬೈನ ಮಾರುಕಟ್ಟೆಗೆ ಬಂದಿತ್ತು. ಅಲ್ಲಿಂದ ದೇಶದ ವಿವಿಧ ಭಾಗಗಳಿಗೆ ವಿತರಣೆಯಾಗುತ್ತಿದೆ. ಮಂಗಳೂರಿಗೆ ಟ್ರಕ್ ಮೂಲಕ ಗೋಣಿಗಳಲ್ಲಿ ಹೇರಿಕೊಂಡು ತರಲಾಗಿದೆ.
Advertisement
ಈರುಳ್ಳಿ ದರ ಏರಿಕೆಯಿಂದಾಗಿ ಈರುಳ್ಳಿಗೆ ಬೇಡಿಕೆ ಕಡಿಮೆಯಾಗಿದ್ದು, ಈಗ ನಮಗೆ ಕೆಲಸವೇ ಇಲ್ಲದಂತಾಗಿದೆ ಎಂದು ಬಂದರ್ ನ ತಲೆ ಹೊರೆ ಕಾರ್ಮಿಕ ಹಮೀದ್ ಹೇಳುತ್ತಾರೆ. ಸದ್ಯ ಈರುಳ್ಳಿಯು ಗ್ರಾಹಕರ ಕಣ್ಣಲ್ಲಿ ಮತ್ತಷ್ಟು ಕಣ್ಣೀರು ತರಿಸಿದ್ದು, ಆಮದು ಈರುಳ್ಳಿಯೂ ಜನರ ಕಣ್ಣೀರನ್ನು ಒರಸದಿರುವುದೇ ವಿಪರ್ಯಾಸವಾಗಿದೆ.
Advertisement
ಹೋಟೇಲ್ ಗಳಲ್ಲಿ ಸಿಗ್ತಿಲ್ಲ ಈರುಳ್ಳಿ ತಿಂಡಿಗಳು:
ಈರುಳ್ಳಿ ಬೆಲೆ ಏರಿಕೆ ಆಗಿರುವುದರಿಂದ ಎಲ್ಲಾ ಹೋಟೆಲ್ ಗಳಲ್ಲಿ ಈರುಳ್ಳಿ ಬಜೆ, ಈರುಳ್ಳಿ ದೋಸೆಗಳನ್ನು ತಯಾರಿಸುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆ. ಜೊತೆಗೆ ತರಕಾರಿ ಹೋಟೆಲ್ ಗಳಲ್ಲಿ ಬಾಜಿ ತಯಾರಿಕೆಯನ್ನೂ ಸದ್ಯದ ಮಟ್ಟಿಗೆ ನಿಲ್ಲಿಸಿದ್ದೇವೆ. ಮಾಂಸಾಹಾರಿ ಹೋಟೇಲ್ ಗಳಲ್ಲಿ ಮಾಮೂಲಿಯಂತೆ ಈರುಳ್ಳಿ ಬಳಕೆಯಾಗುತ್ತಿದೆ ಎಂದು ದಕ್ಷಿಣ ಕನ್ನಡ ಹೊಟೇಲ್ ಮಾಲಿಕರ ಸಂಘದ ಅಧ್ಯಕ್ಷ ಕುಡ್ಪಿ ಜಗದೀಶ್ ಶೆಣೈ ಅಭಿಪ್ರಾಯಪಟ್ಟಿದ್ದಾರೆ.
ಕೊರತೆ ಯಾಕೆ?
ಈ ವರ್ಷ ಈರುಳ್ಳಿ ಬೆಳೆಯುವ ರಾಜ್ಯಗಳಾದ ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಭಾರೀ ಮಳೆಯಾದ ಪರಿಣಾಮ ಬೆಳೆ ಹಾಳಾಗಿದೆ. ಮಾರುಕಟ್ಟೆಯಲ್ಲಿ ಬೇಡಿಕೆಗೆ ಸರಿಯಾಗಿ ಈರುಳ್ಳಿ ಪೂರೈಕೆ ಆಗದ ಪರಿಣಾಮ ಬೆಲೆ ದಿನೇ ದಿನೇ ಜಾಸ್ತಿಯಾಗುತ್ತಿದೆ.