ಮಂಗಳೂರು: ಭಾರತೀಯ ಪರಂಪರೆಯಲ್ಲಿ ಗೋಮಾತೆಗೆ ಪೂಜನೀಯ ಸ್ಥಾನವಿದೆ. ಅಂತಹ ಗೋಮಾತೆಯ ಪೂಜೆಯನ್ನು ಗ್ರಾಮೀಣ ಭಾಗದಲ್ಲಿ ನಡೆಸಲಾಗುತ್ತದೆ. ಆದರೆ ನಗರ ವಾಸಿಗಳಿಗೆ ಇಂತಹ ಅವಕಾಶ ಸಿಗೋದು ಕಡಿಮೆ. ಹೀಗಾಗಿ ಮಂಗಳೂರು ನಗರದಲ್ಲಿ ನಗರವಾಸಿಗಳಿಗಾಗಿ ಬೃಹತ್ ಗೋಮಂಡಲ ಅನ್ನುವ ಗೋವುಗಳ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮಂಗಳೂರಿನ ನೆಹರೂ ಮೈದಾನದಲ್ಲಿ ಬೃಹತ್ ಗೋಮಂಡಲ ಆಯೋಜಿಸಲಾಗಿದ್ದು, ಜನರು ಗೋಮಾತೆಗೆ ಪೂಜೆ ಸಲ್ಲಿಸಿ ಪುನೀತರಾದರು. ಪಜೀರು ಬೀಜಗುರಿ ಗೋವನಿತಾಶ್ರಯ ಟ್ರಸ್ಟ್‍ನ 20 ವರ್ಷ ತುಂಬಿದ ಹಿನ್ನೆಲೆಯಲ್ಲಿ ಬೃಹತ್ ಗೋಮಂಡಲ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಎರಡು ದಿನಗಳ ಕಾಲ ಆಯೋಜಿಸಲಾಗಿತ್ತು. ಗೋಮಂಡಲದ ಸುತ್ತಲೂ ವೃತ್ತಾಕಾರದಲ್ಲಿ ದನ ಕರುಗಳನ್ನು ಇರಿಸಲಾಗಿತ್ತು. ಇಲ್ಲಿರುವ ಎಲ್ಲ ಗೋವುಗಳಿಗೆ ವಿಶೇಷ ಗೋಪೂಜೆ, ಗೋ ಆರತಿ ಮತ್ತು ಆಹಾರ ನೀಡಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು. ಗೋಧೂಳಿ ಲಗ್ನದ ಪ್ರಾತ್ಯಕ್ಷಿಕೆ ಇಲ್ಲಿ ನಡೆಯಿತು.
Advertisement
Advertisement
ಗೋಮಂಡಲದ ಅಂಗವಾಗಿ ಗೋಪಾಲಕೃಷ್ಣನ ಮೂರ್ತಿಯನ್ನೊಳಗೊಂಡ ರಥವನ್ನು ಪ್ರತಿಷ್ಠಾಪಿಸಲಾಗಿತ್ತು. ನೂರಾರು ಗೋವುಗಳ ಮಧ್ಯೆ ಎರಡು ದಿನಗಳಲ್ಲಿ ಮೂರು ಹೊತ್ತು ಪೂಜೆ, ಸೌತಡ್ಕ ಗಣಪತಿ ದೇವರ ಮಾದರಿಯಲ್ಲಿರುವ ಗಣಪತಿ ಮೂರ್ತಿ ಹಾಗೂ ಅಪರೂಪದ ಬಸವರೂಪಿ ಹಾವೇರಿಯ ಶ್ರೀ ಮೂಕಪ್ಪ ಸ್ವಾಮಿಯ ದರ್ಶನ ಇತ್ಯಾದಿಗಳಿತ್ತು.
Advertisement
ಗೋಮಂಡಲದಲ್ಲಿ ಐದು ಅಡಿ ಉದ್ದದ ಶಿವಲಿಂಗ ಪ್ರತಿಷ್ಠಾಪಿಸಿ, ಅದರ ಪಕ್ಕದಲ್ಲಿ 8 ವರ್ಷದ ನಂದಿಯನ್ನು ನಿಲ್ಲಿಸಿರುವುದು ಆಕರ್ಷಕವಾಗಿತ್ತು. ಟ್ರಸ್ಟ್ ನ ಹಟ್ಟಿಯಲ್ಲಿರುವ ಸುಮಾರು 6 ಅಡಿ ಎತ್ತರದ ಬೃಹತ್ ಹೋರಿಯನ್ನು ನಂದಿಯಾಗಿ ನಿಲ್ಲಿಸಲಾಗಿತ್ತು. ಟ್ರಸ್ಟ್ ಆಶ್ರಯದಲ್ಲಿ ನಡೆಸಲ್ಪಡುತ್ತಿರುವ ಕಪಿಲಾ, ಅಮೃತಾ, ಗಂಗಾ ಮತ್ತು ಗೌರಿ ಹಟ್ಟಿಗಳಲ್ಲಿರುವ 300ಕ್ಕೂ ಹೆಚ್ಚು ಗೋವುಗಳ ಪೈಕಿ 100 ಗೋವುಗಳನ್ನು ಗೋಮಂಡಲಕ್ಕೆ ಕರೆ ತರಲಾಗಿತ್ತು.
Advertisement
ಅಂಚೆ ಚೀಟಿ ಪ್ರದರ್ಶನ:
ಪ್ರಶಾಂತ್ ಶೇಟ್ ಅವರು ಸಂಗ್ರಹಿಸಿದ 74 ದೇಶಗಳ ಗೋವಿನ ಚಿತ್ರವುಳ್ಳ ಅಂಚೆ ಚೀಟಿ ಪ್ರದರ್ಶನವು ಗಮನ ಸೆಳೆಯಿತು. ಸಾವಯವ ವಸ್ತುಗಳ ಮಳಿಗೆ, ದೇಸೀಯ ಉತ್ಪನ್ನಗಳ ಮಳಿಗೆಗಳು ಸಹಿತ ಸುಮಾರು 30ಕ್ಕೂ ಹೆಚ್ಚು ಮಳಿಗೆಗಳಿದ್ದವು. ಆಗಮಿಸಿದ ಗೋಭಕ್ತರು, ಮಕ್ಕಳು ದನಕರುಗಳ ನಡುವೆ ಸೆಲ್ಫಿ ತೆಗೆದು ಸಂಭ್ರಮಿಸಿದರು.
ಶ್ರೀ ಮೂಕಪ್ಪ ಸ್ವಾಮಿಯ ದರ್ಶನ:
ಹಾವೇರಿಯ ಅಪರೂಪದ ಶ್ರೀ ಮೂಕಪ್ಪ ಸ್ವಾಮಿಯ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಸವರೂಪಿಯಾದ ಮೂಕಪ್ಪ ಸ್ವಾಮಿಯನ್ನು ಪೂಜೆ ಮಾಡಿದ ಜನ ದರ್ಶನ ಪಡೆದು ಪುನೀತರಾದರು. ದನ ಕರುಗಳನ್ನೇ ನೋಡದ ಎಳೆಯ ಮಕ್ಕಳಿಗೆ ದನಕರುಗಳನ್ನು ನೋಡುವುದು ಹೊಸ ಅನುಭವವಾಗಿತ್ತು. ಈ ಹಿಂದೆ 2012ರಲ್ಲಿ ಸಣ್ಣ ಮಟ್ಟದಲ್ಲಿ ಗೋಮಂಡಲ ನಡೆಸಲಾಗಿತ್ತು.
ಪರಿಸರ ಸಂರಕ್ಷಣೆಯೊಂದಿಗೆ ಗೋ ಸಂರಕ್ಷಣೆಯ ಅಗತ್ಯ. ಪಶು ಸಂಗೋಪನೆಯ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಬೃಹತ್ ಗೋಮಂಡಲ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಅಯೋಧ್ಯೆ ರಾಮ ಮಂದಿರ:
ಮಂಗಳೂರಿನ ಶಾರದಾ ವಿದ್ಯಾಲಯದ ಚಿತ್ರಕಲಾ ಶಿಕ್ಷಕ ರೋಹಿತ್ ರಚಿಸಿದ ಅಯೋಧ್ಯೆ ಶ್ರೀರಾಮ ಮಂದಿರದ ಮಾದರಿ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಅಯೋಧ್ಯೆಯ ರಾಮ ಮಂದಿರವೇ ನೆಹರೂ ಮೈದಾನದಲ್ಲಿ ಸೃಷ್ಟಿಯಾದಂತೆ ಭಾಸವಾಗುವಂತಿದೆ ಈ ಮಾದರಿ.