ಮಂಗಳೂರು: ನಗರದಲ್ಲಿ ನಡೆದ ಗೋಲಿಬಾರ್ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ದಕ್ಷಿಣ ಕನ್ನಡ-ಉಡುಪಿ ಮುಸ್ಲಿಂ ಸೆಂಟ್ರಲ್ ಕಮಿಟಿ ಒತ್ತಾಯಿಸಿದೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಮಿಟಿಯ ಅಧ್ಯಕ್ಷ ಎಂ.ಕೆ.ಮಸೂದ್, ಮಂಗಳೂರಿನ ಗೋಲಿಬಾರ್ ಘಟನೆಗೆ ಕಾರಣ ಯಾರು ಎಂದು ಪ್ರಶ್ನಿಸಿದ್ದು, ಆವತ್ತು ಕಫ್ರ್ಯೂ ವಿಧಿಸಿ, ಫೈರಿಂಗ್ ಮಾಡಿದ್ದಾರೆ. ಕಫ್ರ್ಯೂ ವಿಧಿಸಿರುವ ಬಗ್ಗೆ ಜನರಿಗೆ ತಿಳಿಸದೇ ಫೈರ್ ಮಾಡಿದ್ದು ಯಾಕೆ? ಕಫ್ರ್ಯೂ ವಿಧಿಸಿದ್ದ ಬಗ್ಗೆ ಜನತೆಗೆ ಯಾವುದೇ ಮಾಹಿತಿ ನೀಡದ ಪೊಲೀಸರು ಗೋಲಿಬಾರ್ ನಡೆಸುವ ಬಗ್ಗೆಯೂ ಜನತೆಯನ್ನು ಎಚ್ಚರಿಸಿಲ್ಲ. ಹೀಗಾಗಿ ಈ ಘಟನೆಗೆ ಕಾರಣವಾದ ಅಧಿಕಾರಿಗಳನ್ನು ಶಿಕ್ಷಿಸಬೇಕು. ನಿಜವಾದ ವಿಚಾರ ಹೊರ ಬರಬೇಕಾದ್ರೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
Advertisement
Advertisement
ಸಿಎಎ ವಿರುದ್ಧ ಸೆಂಟ್ರಲ್ ಕಮಿಟಿಯಡಿ ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಪ್ರತಿಭಟಿಸುತ್ತೇವೆ. ಕ್ರಿಸ್ಮಸ್ ಹಿನ್ನೆಲೆ ಡಿ.28ರಂದು ನಡೆಸಬೇಕಿದ್ದ ಪ್ರತಿಭಟನೆಯನ್ನು ಮುಂದೂಡಿಕೆ ಮಾಡಲಾಗಿದೆ. ಜ.4 ರಂದು ಪೊಲೀಸ್ ಅನುಮತಿ ಪಡೆದು ಪ್ರತಿಭಟಿಸುತ್ತೇವೆ. ಪ್ರತಿಭಟಿಸಲು ಖಂಡಿತವಾಗಿಯೂ ಪ್ರಜಾಪ್ರಭುತ್ವದಲ್ಲಿ ಆಸ್ಪದವಿದೆ. ಹೀಗಾಗಿ ಅನುಮತಿ ಸಿಗುವ ನಂಬಿಕೆ ಇದೆ ಎಂದರು. ಗೋಲಿಬಾರ್ ನಲ್ಲಿ ಮೃತಪಟ್ಟ ಇಬ್ಬರು ಮತ್ತು ಗಾಯಾಳು ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಬೇಕು. ಈಗ ಸರ್ಕಾರ ಮೃತರ ಕುಟುಂಬಸ್ಥರಿಗೆ ಘೋಷಿಸಿದ 10 ಲಕ್ಷ ರೂ. ಅವರ ಸಂಸಾರ ನಿರ್ವಹಣೆಗೆ ಸಾಕಾಗೋದಿಲ್ಲ. ಹೀಗಾಗಿ ಹೆಚ್ಚಿನ ಪರಿಹಾರ ಸರ್ಕಾರ ಘೋಷಿಸಬೇಕು. ಮೃತರ ಕುಟುಂಬದ ಓರ್ವರಿಗೆ ಸರ್ಕಾರಿ ಉದ್ಯೋಗ ನೀಡಬೇಕೆಂದು ಎಂ.ಕೆ.ಮಸೂದ್ ಆಗ್ರಹಿಸಿದರು.