ಕ್ಯಾನ್ಬೆರಾ: ಮಂಗಳವಾರ ಆಸ್ಟ್ರೇಲಿಯಾದಲ್ಲಿ (Australia) ನಡೆದ ಅನಿವಾಸಿ ಭಾರತೀಯರ ಸಮ್ಮೇಳನದಲ್ಲಿ ಮೋದಿಯ ಭಾಷಣ ಎಲ್ಲರನ್ನೂ ಮೋಡಿ ಮಾಡಿತ್ತು. ಅದರಲ್ಲೂ ಅಲ್ಲಿ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದಿತ್ತು. ಅಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ತುಳುನಾಡಿಗೂ ಅವಿನಾಭಾವ ಸಂಬಂಧವಿದೆ. ಅದೇನೆಂದರೆ ಕಾರ್ಯಕ್ರಮದಲ್ಲಿ ಮಂಗಳೂರು (Mangaluru) ಮೂಲದ ಯುವತಿ ಹಾಗೂ ಆಕೆಯ ತಂಡ ಕಾಂತಾರ (Kantara) ಸಿನಿಮಾದ ‘ವರಾಹ ರೂಪಂ’ ಹಾಗೂ ತುಳುವಿನ ‘ವಾ ಪೊರ್ಲುಯಾ’ ಹಾಡಿಗೆ ಹೆಜ್ಜೆ ಹಾಕಿದ್ದು ಎಲ್ಲರ ಮೆಚ್ಚುಗೆ ಗಳಿಸಿದೆ.
ಸಿಡ್ನಿಯ (Sydney) ಫುಟ್ಬಾಲ್ ಆಟದ ಮೈದಾನದಲ್ಲಿ ನಡೆದ ಅನಿವಾಸಿ ಭಾರತೀಯರ ಸಮ್ಮೇಳನಕ್ಕೆ ಪ್ರಧಾನಿ ಮೋದಿಯವರನ್ನು ವಿಶೇಷವಾಗಿ ಸ್ವಾಗತಿಸಲಾಯಿತು. ಅಲ್ಲದೇ ಸಭೆಗೂ ಮೊದಲು ವಿವಿಧ ಭಾರತೀಯ ಶೈಲಿಗಳಲ್ಲಿ ನೃತ್ಯ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಅದರಲ್ಲಿ ಮಂಗಳೂರು ಮೂಲದ ಯುವತಿಯೋರ್ವಳು ತನ್ನ ತಂಡದೊಂದಿಗೆ ಕಾಂತಾರ ಸಿನಿಮಾದ ‘ವರಾಹ ರೂಪಂ’ ಹಾಗೂ ತುಳುನಾಡಿನ ‘ವಾ ಪೊರ್ಲುಯಾ’ ಹಾಡಿಗೆ ಹೆಜ್ಜೆ ಹಾಕಿ ಕರ್ನಾಟಕ ಹಾಗೂ ತುಳುನಾಡಿನ ಗರಿಮೆಯನ್ನು ಎತ್ತಿ ಹಿಡಿದಿದ್ದಾಳೆ. ಇದನ್ನೂ ಓದಿ: ಸಾಂಪ್ರದಾಯಿಕ ಸ್ವಾಗತ ಕೊಟ್ಟು ಮೋದಿಯನ್ನು ʻಬಾಸ್ʼ ಎಂದು ಕರೆದ ಆಸ್ಟ್ರೇಲಿಯಾ ಪ್ರಧಾನಿ
ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ಸೇರಿದ್ದ ಆ ಕಾರ್ಯಕ್ರಮದಲ್ಲಿ, ಮಂಗಳೂರಿನ ಬಿಜೈ ಕಾಪಿಕಾಡ್ ಮೂಲದ ಅನಿಷಾ ಪೂಜಾರಿ (Anisha Poojari) ಹಾಗೂ ಆಕೆಯ ತಂಡ ಹೆಜ್ಜೆ ಹಾಕಿದ್ದಾರೆ. ಉಡುಪಿ ಕುಂದಾಪುರ ಮೂಲದ ನಾಟ್ಯ ವಿದುಷಿ ಪಲ್ಲವಿ ಭಾಗವತ್ ಈಕೆಯ ಗುರುವಾಗಿದ್ದು, ತಮ್ಮ ನೃತ್ಯ ಸಂಸ್ಥೆಯ ನಾಟ್ಯೋಕ್ತಿ ಶಿಷ್ಯ ವೃಂದದೊಂದಿಗೆ ಕರ್ನಾಟಕದ ಹಳ್ಳಿ ಸೊಬಗನ್ನು ತೋರಿಸುವ ಜಾನಪದ ಹಾಗೂ ಯಕ್ಷಗಾನ ಶೈಲಿಯಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ಇದನ್ನೂ ಓದಿ: ಶಿಷ್ಟಾಚಾರಕ್ಕೆ ಗುಡ್‌ಬೈ – ಮೋದಿ ಕಾಲಿಗೆ ನಮಸ್ಕರಿಸಿ ಸ್ವಾಗತ ಕೋರಿದ ಪಪುವಾ ನ್ಯೂ ಗಿನಿಯಾ ಪ್ರಧಾನಿ
ಅನಿಷಾ ತಮ್ಮ ನಾಲ್ಕನೇ ವಯಸ್ಸಿನಲ್ಲಿ ಭರತನಾಟ್ಯ ಕಲಿಕೆಯನ್ನು ಆರಂಭಿಸಿದ್ದು, ವಿದ್ವಾನ್ ಪ್ರೇಮನಾಥ ಮಾಸ್ಟರ್ ಬಳಿ ಹೆಚ್ಚಿನ ಶಿಕ್ಷಣವನ್ನು ಪಡೆದುಕೊಂಡರು. ಅಲ್ಲದೇ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಭರತನಾಟ್ಯ ಪ್ರದರ್ಶನ ನೀಡಿ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ವಿವಾಹದ ಬಳಿಕ ಪತಿ ಹಾಗೂ ಮಗುವಿನೊಂದಿಗೆ ಸಿಡ್ನಿಯಲ್ಲಿ ನೆಲೆಸಿದ್ದ ಅವರು ಅಲ್ಲಿಯೂ ಸಹ ಭರತನಾಟ್ಯ ಕಲಿಕೆಯನ್ನು ಮುಂದುವರಿಸಿದ್ದಾರೆ. ನಾಟ್ಯ ವಿದುಷಿ ಪಲ್ಲವಿ ಭಾಗವತ್ ಅವರ ಬಳಿ ಕಲಿಕೆ ಮುಂದುವರಿಸಿದ ಅವರು ಇಂದು ಪ್ರಧಾನಿ ಮೋದಿಯ (Narendra Modi) ಮುಂದೆ ಹೆಜ್ಜೆ ಹಾಕಿದ್ದು ಸಂತೋಷದ ವಿಷಯವೇ ಸರಿ. ಇದನ್ನೂ ಓದಿ: ರಷ್ಯಾ ಯುದ್ಧ ಆರಂಭಿಸಿದ ಬಳಿಕ ಇದೇ ಮೊದಲ ಬಾರಿಗೆ ಉಕ್ರೇನ್ ಅಧ್ಯಕ್ಷ ಭೇಟಿಯಾದ ಮೋದಿ
ಈ ಕುರಿತು ಅನಿಷಾ ತಂದೆ ಮಾತನಾಡಿ, ಅನಿಷಾ 6 ವರ್ಷಗಳಿಂದ ಕುಟುಂಬ ಸಮೇತ ಸಿಡ್ನಿಯಲ್ಲಿ ನೆಲೆಸುತ್ತಿದ್ದಾಳೆ. ಚಿಕ್ಕಂದಿನಿಂದಲೂ ಡ್ಯಾನ್ಸ್‌ನಲ್ಲಿ ಅಪಾರ ಆಸಕ್ತಿ ಹೊಂದಿದ್ದ ಈಕೆ, ಮೋದಿ ಮುಂದೆ ಹೆಜ್ಜೆ ಹಾಕಿರುವುದು ಸಂತಸ ತಂದಿದೆ ಎಂದರು. ಇದನ್ನೂ ಓದಿ: ಭಾರತ ಪಾಕ್‌ನೊಂದಿಗೆ ಸಾಮಾನ್ಯ ಬಾಂಧವ್ಯ ಬಯಸುತ್ತದೆ, ಆದರೆ… – ಮೋದಿ ಹೇಳಿದ್ದೇನು?