ಮಂಗಳೂರು: ಬಜೆಟ್‍ನಲ್ಲಿ ಎತ್ತಿನಹೊಳೆ ಯೋಜನೆಗೆ ಸರ್ಕಾರ 1,500 ಕೋಟಿ ರೂಪಾಯಿ ಹೆಚ್ಚುವರಿಯಾಗಿ ಮೀಸಲಿರಿಸಿದೆ. ಇದನ್ನ ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷ, ಮಂಗಳೂರು ಸಂಸದರೂ ಆಗಿರುವ ನಳಿನ್ ಕುಮಾರ್ ಕಟೀಲ್ ಸ್ವಾಗತಿಸಿದ್ದಾರೆ.
ವಿಪರ್ಯಾಸವೆಂದರೆ ಇದೇ ಯೋಜನೆಯನ್ನು ವಿರೋಧಿಸಿ ಕಳೆದ 5 ವರ್ಷಗಳ ಹಿಂದೆ ನಳಿನ್ ಕುಮಾರ್ ಕಟೀಲು ಬೃಹತ್ ಹೋರಾಟವನ್ನೇ ನಡೆಸಿದ್ದರು. ಕರಸೇವೆ ಮಾಡಿ ಯೋಜನೆಯನ್ನು ಒಡೆದು ಹಾಕೋದಾಗಿ ಗುಡುಗಿದ್ದರು. ಆದರೆ ಈಗ ನಳಿನ್ ಕುಮಾರ್ ಅದೇ ಯೋಜನೆಗೆ ಬೆಂಬಲ ನೀಡಿದ್ದು, ಎತ್ತಿನಹೊಳೆ ವಿರೋಧಿ ಹೋರಾಟಗಾರರ ಕಣ್ಣು ಕೆಂಪಾಗಿಸಿದೆ.
Advertisement
Advertisement
ಬಯಲುಸೀಮೆಗೆ ನೀರುಣಿಸುವ ಎತ್ತಿನಹೊಳೆ ಯೋಜನೆಗೆ ಸಾಕಷ್ಟು ಜನರ ವಿರೋಧ ಇದೆ. ಈ ಹಿಂದಿನ ಸಿದ್ದರಾಮಯ್ಯ ಸರ್ಕಾರ 13 ಸಾವಿರ ಕೋಟಿಯನ್ನು ಈ ಯೋಜನೆಗೆ ಈಗಾಗಲೇ ಸುರಿದಿದೆ. ಬಯಲುಸೀಮೆಗೆ ಈ ಯೋಜನೆಯಿಂದ ನೀರು ಹೋಗಲ್ಲ ಅಂತ ತಜ್ಞರೇ ಅಭಿಪ್ರಾಯ ಮಂಡಿಸಿದ್ದಾರೆ. ಆದರೆ ಈಗ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬಜೆಟ್ ನಲ್ಲಿ ಮತ್ತೆ ಒಂದೂವರೆ ಸಾವಿರ ಕೋಟಿ ಈ ಯೋಜನೆಗೆ ಮೀಸಲಿರಿಸಿದೆ. ಆದರೆ ವಿಷ್ಯ ಏನಂದ್ರೆ ಒಂದು ಕಾಲದ ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟಗಾರ, ಈಗಿನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಈಗ ಸರ್ಕಾರದ ಕ್ರಮವನ್ನು ಬೆಂಬಲಿಸಿದ್ದಾರೆ. ಎತ್ತಿನಹೊಳೆ ಯೋಜನೆಯ ಅಭಿವೃದ್ಧಿಗೆ ಸರ್ಕಾರ ಹಣ ನೀಡಿದೆ ಎಂದು ಸಮರ್ಥಿಸಿದ್ದಾರೆ. ಇದು ಕರಾವಳಿಯ ಮಂದಿಯ ಆಕ್ರೋಶಕ್ಕೆ ಕಾರಣವಾಗಿದೆ.
Advertisement
Advertisement
ಕಳೆದ ಐದು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್, ಎತ್ತಿನ ಹೊಳೆ ಯೋಜನೆ ವಿರೋಧಿಸಿ ಪಾದಯಾತ್ರೆ ಮಾಡಿದ್ದರು. ಮಂಗಳೂರಿನಿಂದ ಆರಂಭವಾದ ಪಾದಯಾತ್ರೆಗೆ ಜನ ಪಕ್ಷಾತೀತವಾಗಿ ಬೆಂಬಲವನ್ನೂ ನೀಡಿದ್ರು. ಹಾಸನ ಜಿಲ್ಲೆ ಗಡಿಭಾಗದವರೆಗೆ ಪಾದಯಾತ್ರೆ ನಡೆಸಿದ್ದ ನಳಿನ್ ಕುಮಾರ್ ಕಟೀಲ್ ರನ್ನು ಆಗಿನ ಕಾಂಗ್ರೆಸ್ ಸರ್ಕಾರ ಬಂಧನ ಮಾಡಿತ್ತು. ಈ ವೇಳೆ ಸರ್ಕಾರದ ವಿರುದ್ಧ ಗುಡುಗಿದ್ದ ನಳಿನ್ ಕುಮಾರ್ ಕಟೀಲ್, ಅಯೋಧ್ಯೆಯ ಕರಸೇವೆ ರೀತಿ ಎತ್ತಿನಹೊಳೆ ಯೋಜನೆಯನ್ನೂ ಕರಸೇವೆ ಮಾಡಿ ಧ್ವಂಸ ಮಾಡೋದಾಗಿ ಹೇಳಿದ್ದರು. ಆದರೆ ಇಂದು ಮಾತ್ರ ಕಟೀಲ್ ಮಾತು ಬದಲಿಸಿದ್ದಾರೆ. ವಿರೋಧ ಮಾಡಿದ ಯೋಜನೆಗೆ ಬಹು ಪರಾಕ್ ಅಂದಿದ್ದಾರೆ. ಇದು ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟಗಾರರ ಸಿಟ್ಟಿಗೆ ಕಾರಣವಾಗಿದೆ. ಇದನ್ನೂ ಓದಿ: ಮಹದಾಯಿಗೆ 500 ಕೋಟಿ, ಎತ್ತಿನಹೊಳೆಗೆ 1500 ಕೋಟಿ – ನೀರಾವರಿಗೆ ಸಿಕ್ಕಿದ್ದು ಏನು?
ಎತ್ತಿನಹೊಳೆ ಯೋಜನೆಗೆ ಈಗಾಗಲೇ ಸರ್ಕಾರದ ಹದಿಮೂರುವರೆ ಸಾವಿರ ಕೋಟಿ ಹಣವನ್ನು ಸುರಿದಿದೆ. ಯೋಜನೆಯಿಂದ ಬಯಲುಸೀಮೆಗೆ ನೀರು ಹರಿಯಲ್ಲ ಎಂಬ ವಾದವನ್ನು ತಜ್ಞರು ಮಂಡಿಸಿದ್ದಾರೆ. ಇದರ ಹೊರತಾಗಿಯೂ ಸರ್ಕಾರ ಮಾತ್ರ ಯೋಜನೆಗೆ ಮತ್ತಷ್ಟು ಅನುದಾನ ನೀಡಿರೋದು ಅಕ್ರಮದ ಗುಮಾನಿ ಎದ್ದಿದೆ. ಸಂಸದ ಕಟೀಲ್ ಯೋಜನೆ ವಿಚಾರದಲ್ಲಿ ದ್ವಂದ್ವ ನಿಲುವು ತೋರಿಸಿದ್ದು, ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೂ ಕಾರಣವಾಗಿದೆ. ಅಲ್ಲದೆ ಯೋಜನೆ ಬಗ್ಗೆ ಹಸಿರು ಪೀಠದಲ್ಲಿ ಕೇಸ್ ನಡೆಯುತ್ತಿದ್ದರೂ ಸರ್ಕಾರ ಮತ್ತೆ ಹಣ ನೀಡಿರೋದು ವಿವಾದಕ್ಕೆ ಗ್ರಾಸವಾಗಿದೆ. ಇದನ್ನೂ ಓದಿ: ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ – ಸಕಲೇಶಪುರ ಭೂ ಕುಸಿತಕ್ಕೆ ಎತ್ತಿನಹೊಳೆ ಯೋಜನೆಯ ಅಣೆಕಟ್ಟುಗಳೇ ಕಾರಣವೇ?
ಒಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ನಳಿನ್ ಕುಮಾರ್ ಕಟೀಲ್ ಗೆ ಒಂದಲ್ಲೊಂದು ವಿಚಾರ ಮುಳುವಾಗುತ್ತಿದೆ. ಎತ್ತಿನಹೊಳೆ ಯೋಜನೆ ವಿರೋಧ ಮಾಡಿದ್ದು ಮತಬೇಟೆಯ ಭಾಗನಾ ಅನ್ನೋದು ಸದ್ಯ ಕರಾವಳಿಯಲ್ಲಿ ನಡೆಯುತ್ತಿರುವ ಚರ್ಚೆಯ ವಿಷಯವಾಗಿದೆ.