ಮಂಗಳೂರು: ರಾಜ್ಯ ಸರ್ಕಾರದ ಉಳಿವಿಗೆ ನಿರ್ಣಾಯಕವಾಗಿರುವ ಉಪ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನದಲ್ಲಿ ಗೆಲುವಾಗಲಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಧರ್ಮಸ್ಥಳದ ಮಂಜುನಾಥನ ಮೊರೆ ಹೋಗಿದ್ದಾರೆ.
ಫಲಿತಾಂಶ ಪ್ರಕಟವಾಗುವ ಮುನ್ನವೇ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ಸಿಎಂ ಯಡಿಯೂರಪ್ಪರಿಗೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಾಥ್ ನೀಡಿದರು. ಮಂಜುನಾಥನಿಗೆ ರುದ್ರಾಭಿಷೇಕ ಪೂಜೆ ಸಲ್ಲಿಸಿದ ಯಡಿಯೂರಪ್ಪ ಉಪ ಚುನಾವಣೆಯ ಗೆಲುವಿಗೆ ಪ್ರಾರ್ಥನೆ ಸಲ್ಲಿಸಿದರು.
Advertisement
Advertisement
ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮುಖ್ಯಮಂತ್ರಿಯವರನ್ನು ಬರಮಾಡಿಕೊಂಡರು. ಮಂಜುನಾಥನಲ್ಲಿ ಸಿಎಂ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪೂಜೆಯ ಬಳಿಕ ಹುಮ್ಮಸ್ಸಿನಿಂದ ಹೊರ ಬಂದ ಯಡಿಯೂರಪ್ಪ ಸರ್ಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಮುಂದಿನ ಮೂರೂವರೆ ವರ್ಷ ಸುಭಧ್ರ ಸರ್ಕಾರ ನಡೆಸುತ್ತೇವೆ. ಉಪಚುನಾವಣೆಯ ಫಲಿತಾಂಶದಲ್ಲಿ 13 ಕ್ಷೇತ್ರಗಳನ್ನು ಗೆದ್ದು ಮತ್ತೆ ಸರ್ಕಾರ ಭದ್ರವಾಗಿರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.