ಮಂಗಳೂರು: ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ದೀಪಕ್ ರಾವ್ ಹಾಗೂ ಬಶೀರ್ ಅವರ ಪ್ರಾಣ ರಕ್ಷಣೆಗೆ ಪ್ರಯತ್ನಿಸಿ ಮಾನವೀಯತೆ ಮೆರೆದಿದ್ದ ಇಬ್ಬರಿಗೆ ಕಲಬುರಗಿಯ ನ್ಯಾಯವಾದಿಯೊಬ್ಬರು 50 ಸಾವಿರ ರೂ. ನೀಡಿದ್ದಾರೆ.
ಕಾಟಿಪಳ್ಳದ ಅಬ್ದುಲ್ ಮಜೀದ್ ಹಾಗೂ ಕೊಟ್ಟಾರದ ಶೇಖರ್ ಕುಲಾಲ್ ಅವರ ಮಾನವೀಯತೆಯನ್ನು ಗಮನಿಸಿದ್ದ ಕಲಬುರಗಿಯ ನ್ಯಾಯವಾದಿ ವಿಲಾಸ್ ಕುಮಾರ್ ಇಬ್ಬರಿಗೂ ತಲಾ 50 ಸಾವಿರದ ಚೆಕ್‍ಗಳನ್ನು ನೀಡಿದ್ದಾರೆ. ಆದರೆ ತಾನು ಮಾಡಿದ ಸಹಾಯ ಪ್ರಚಾರವಾಗಬಾರದೆಂದು ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಚೆಕ್ಕನ್ನು ರವಾನಿಸಿದ್ದು ಇಬ್ಬರಿಗೂ ಹಸ್ತಾಂತರಿಸುವಂತೆ ಪತ್ರದಲ್ಲಿ ಕೇಳಿಕೊಂಡಿದ್ದರು.
Advertisement
Advertisement
ಇಂತಹ ಒಳ್ಳೆಯ ಕಾರ್ಯ ಎಲ್ಲರಿಗೂ ತಿಳಿಯಬೇಕೆನ್ನುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಪರ ಜಿಲ್ಲಾಧಿಕಾರಿ ಕುಮಾರ್ ಅವರು ಇಬ್ಬರಿಗೂ ಚೆಕ್ ಅನ್ನು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲೇ ವಿತರಿಸಿದರು. ಕಳೆದ ಜನವರಿ 3 ರಂದು ಕಾಟಿಪಳ್ಳದಲ್ಲಿ ದೀಪಕ್ ರಾವ್ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ ರಸ್ತೆ ಬದಿಯಲ್ಲಿ ಬಿದ್ದಿದ್ದ ಅಲ್ಲಿನ ನಿವಾಸಿ ಅಬ್ದುಲ್ ಮಜೀದ್ ತಕ್ಷಣ ಆಸ್ಪತ್ರೆಗೆ ಸಾಗಿಸಿ ಬದುಕಿಸುವ ಯತ್ನ ಮಾಡಿದ್ದರು. ಅದೇ ದಿನ ಕೊಟ್ಟಾರದಲ್ಲಿ ದುಷ್ಕರ್ಮಿಗಳಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ಅಬ್ದುಲ್ ಬಶೀರ್ ಅವರನ್ನು ಕೊಟ್ಟಾರ ನಿವಾಸಿ ಅಂಬುಲೆನ್ಸ್ ಚಾಲಕ ಶೇಖರ್ ಕುಲಾಲ್ ತಕ್ಷಣ ಆಸ್ಪತ್ರೆಗೆ ಸಾಗಿಸಿ ಬದುಕಿಸುವ ಪ್ರಯತ್ನಿಸಿದ್ದರು, ಆದರೆ ಜ.7 ರಂದು ಬಶೀರ್ ಸಾವನ್ನಪ್ಪಿದ್ದರು. ಈ ಇಬ್ಬರೂ ಮಾನವೀಯತೆ ಮೆರೆದು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು.