ಮಂಗಳೂರು: ದಲಿತ ಮಹಿಳೆ ಎನ್ನುವ ಕಾರಣಕ್ಕೆ ಕರ್ತವ್ಯನಿರತ ದಲಿತ ಮಹಿಳಾ ಪೊಲೀಸ್ ಪೇದೆಯನ್ನು ದೇವಸ್ಥಾನದಿಂದ ಹೊರಕ್ಕೆ ಕಳುಹಿಸಿದ ಅಮಾನವೀಯ ಘಟನೆ ದಕ್ಷಿಣ ಕನ್ನಡದಲ್ಲಿ ನಡೆದಿದೆ.
ಮಂಗಳೂರಿನ ಮೂಡಬಿದ್ರೆ ತಾಲೂಕಿನ ಕಡಂದಲೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿನ ಅರ್ಚಕರು ಮಹಿಳಾ ಪೊಲೀಸ್ ಪೇದೆಯನ್ನು ದೇವಸ್ಥಾನದಿಂದ ಹೊರಗೆ ಕಳುಹಿಸಿದ್ದಾರೆ.
Advertisement
ಮುಜರಾಯಿ ಇಲಾಖೆಯ ಅಧೀನದಲ್ಲಿರುವ ಈ ದೇವಸ್ಥಾನದಲ್ಲಿ ಕಳೆದ ಸೋಮವಾರ ಷಷ್ಠಿ ಮಹೋತ್ಸವ ನಡೆದಿದ್ದು, ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರು. ಸುಮಾರು 25 ಸಾವಿರ ಭಕ್ತರು ಈ ಷಷ್ಠಿ ಮಹೋತ್ಸವದಲ್ಲಿ ಭಾಗಿಯಾಗಿದ್ದರಿಂದ ಸ್ಥಳೀಯ ಮೂಡಬಿದ್ರೆ ಪೊಲೀಸರು ಸಂಪೂರ್ಣ ಭದ್ರತೆ ನೀಡಿದ್ದು, ಶಾಂತಿ ಸುವ್ಯವಸ್ಥೆಗೆ ಸಕಲ ಬಂದೋಬಸ್ತ್ ನಡೆಸಿದ್ದರು.
Advertisement
Advertisement
ದೇವಸ್ಥಾನದ ಒಳಾಂಗಣದಲ್ಲಿ ಭಕ್ತರ ಜನ ಸಂದಣಿಯನ್ನು ನಿಯಂತ್ರಿಸುತ್ತಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ದಲಿತ ಸಮುದಾಯದವರು ಎಂದು ಗೊತ್ತಾಗಿದ್ದೇ ತಡ, ಅಲ್ಲಿನ ಅರ್ಚಕ ವೃಂದದವರು ತಕ್ಷಣ ಆ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ದೇವಸ್ಥಾನದಿಂದ ಹೊರಕ್ಕೆ ಕಳಿಸಿದ್ದಾರೆ. ಪಾರ್ಕಿಂಗ್ ಸ್ಥಳದಲ್ಲಿ ಬಂದೋ ಬಸ್ತ್ ಮಾಡಿ, ದೇವಸ್ಥಾನದ ಒಳಗೆ ನಿಮ್ಮನ್ನು ಬಿಟ್ಟದ್ದು ಯಾರು? ಕ್ಷೇತ್ರಕ್ಕೆ ನಿಮ್ಮಿಂದ ಮೈಲಿಗೆಯಾಗಿದೆ ಎಂದು ಸಾವಿರಾರು ಭಕ್ತರ ಮುಂದೆಯೇ ಅವಮಾನಿಸಿ ಹೊರಗಡೆ ಕಳುಹಿಸಿದ್ದಾರೆ.
Advertisement
ಇದನ್ನು ಕೆಲವರು ವಿರೋಧಿಸಿದರೂ ಅರ್ಚಕ ವೃಂದ ಕ್ಯಾರೇ ಎನ್ನದೆ ದಲಿತ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ದೇವಸ್ಥಾನದಿಂದ ಹೊರಕ್ಕೆ ಕಳುಹಿಸಿದ್ದಾರೆ. ಮಾತ್ರವಲ್ಲದೆ ಭೋಜನ ವ್ಯವಸ್ಥೆಯಲ್ಲೂ ತಾರತಮ್ಯ ನಡೆಸಿದ್ದು, ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ದೇವಸ್ಥಾನದ ಪೂಜೆ ಬಳಿಕ ಬ್ರಾಹ್ಮಣ ಸಮುದಾಯಕ್ಕೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗಿದ್ದು, ಅವರು ಊಟ ಮಾಡಿದ ನಂತರ ಉಳಿದ ಜಾತಿಯ ಭಕ್ತರಿಗೆ ಊಟ ನೀಡಲಾಗಿದೆ.
ಸಹಪಂಕ್ತಿ ಭೋಜನದ ವ್ಯವಸ್ಥೆ ಆಗಬೇಕೆಂದು ಪೇಜಾವರ ಶ್ರೀಗಳು ಸೇರಿದಂತೆ ಎಲ್ಲರೂ ಒತ್ತಾಯ ಮಾಡುತ್ತಿದ್ದರೂ ಈ ಕ್ಷೇತ್ರದಲ್ಲಿ ಇಂತಹ ಜಾತಿ ಆಧಾರದಲ್ಲಿ ಭೋಜನ ವ್ಯವಸ್ಥೆ ಮಾಡೋದು ಇಂದಿಗೂ ಜೀವಂತವಾಗಿ ಉಳಿದಿದೆ. ಮಾತ್ರವಲ್ಲದೆ ದೇವಳಕ್ಕೆ ಬರುವ ಭಕ್ತರನ್ನು ಇಲ್ಲಿನ ಅರ್ಚಕ ವೃಂದ ಜಾತಿ ಆಧಾರದಲ್ಲಿ ಗುರುತಿಸಿ ಸದಾ ಹೀಯಾಳಿಸುತ್ತಿರುವುದು ಭಕ್ತರ ಆಕ್ರೋಶವನ್ನು ಇನ್ನಷ್ಟು ಹೆಚ್ಚಿಸಿದೆ. ಭಕ್ತರು ನೀಡುವ ಕಾಣಿಕೆ ಹಣಕ್ಕೆ ಯಾವುದೇ ಜಾತಿಯನ್ನು ನೋಡದೆ ಕಾಣಿಕೆ ಸಂಗ್ರಹಿಸುವ ಅರ್ಚಕರು, ಕ್ಷೇತ್ರ ಪ್ರವೇಶ, ಭೋಜನ ವ್ಯವಸ್ಥೆಗೆ ಜಾತಿ ಆಧಾರದಲ್ಲಿ ನೋಡುವುದು ಸರಿಯಲ್ಲ ಎಂದು ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೋಟೇಲಿನಲ್ಲಿ ಪೊಲೀಸರ ಊಟ
ಷಷ್ಠಿ ಮಹೋತ್ಸವದ ಸಂದರ್ಭ ಸುವ್ಯವಸ್ಥೆಗೆ ನಿಯೋಜನೆಗೊಂಡ ತಮ್ಮ ಸಹದ್ಯೋಗಿ ದಲಿತ ಮಹಿಳಾ ಸಿಬ್ಬಂದಿಗೆ ಅವಮಾನ ಮಾಡಿದ ದೇವಸ್ಥಾನದ ಅರ್ಚಕ ವೃಂದದ ನಡೆಯಿಂದ ಹಾಗೂ ಭೋಜನದಲ್ಲೂ ಪಂಕ್ತಿ ಭೇದ ಮಾಡಿದ ಅರ್ಚಕರ ವರ್ತನೆಯಿಂದ ಕರ್ತವ್ಯನಿರತ ಎಲ್ಲ ಪೊಲೀಸರು ಸ್ಥಳೀಯ ಹೋಟೇಲ್‍ನಲ್ಲಿ ಮಧ್ಯಾಹ್ನದ ಊಟ ಮಾಡಿದ್ದರು. ದೇವಸ್ಥಾನದಲ್ಲಿ 10 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಿದ್ದರೂ ಈ ಘಟನೆಯಿಂದ ಆಕ್ರೋಶಗೊಂಡ ಸ್ವಾಭಿಮಾನಿ ಭಕ್ತರೂ ಕ್ಷೇತ್ರದ ಭೋಜನ ಸ್ವೀಕರಿಸದೇ ಅವರವರ ಮನೆಯಲ್ಲಿ ಊಟ ಮಾಡಿದ್ದು, ಅರ್ಚಕ ವೃಂದದ ಕೃತ್ಯಕ್ಕೆ ಹಿಡಿಶಾಪ ಹಾಕಿದ್ದಾರೆ.