ಮಂಗಳೂರು: ಹನಿಟ್ರ್ಯಾಪ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಇಬ್ಬರು ಯುವತಿಯರ ಸಹಿತ 8 ಮಂದಿ ಅಪರಾಧಿಗಳಿಗೆ ಮಂಗಳೂರಿನ 4ನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಕೊಣಾಜೆಯ ಶಿಲ್ಪಾ (27), ಅವಿನಾಶ್ (25), ಯತೀಶ್ (26) ಮತ್ತು ರಂಜಿತ್ (23), ದೇರಳಕಟ್ಟೆಯ ನಿತಿನ್ (23), ಕೊಣಾಜೆಯ ಶ್ರೀಜಿತ್ (24), ಬೋಂದೆಲ್‍ನ ಸಚಿನ್ (23), ಕೋಟೆಕಾರ್ ಬೀರಿಯ ತೃಪ್ತಿ (25) ಶಿಕ್ಷೆಗೆ ಗುರಿಯಾದ ಅಪರಾಧಿಗಳು.
ಅಪರಾಧಿಗಳು ಮಂಗಳೂರು ನಗರದ ಬಳ್ಳಾಲ್‍ಬಾಗ್‍ನ ಫ್ಲ್ಯಾಟ್‍ವೊಂದರಲ್ಲಿ 4 ವರ್ಷಗಳ ಹಿಂದೆ ಹನಿಟ್ರ್ಯಾಪ್ ಮೂಲಕ ಬ್ಯಾಂಕ್ ಮ್ಯಾನೇಜರ್ ಒಬ್ಬರಿಂದ ಹಣ ಲಪಟಾಯಿಸಲು ಯತ್ನಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.
ಪ್ರಕರಣದ ಕುರಿತು ವಿಚಾರಣೆ ನಡೆಸಿದ ಕೋರ್ಟ್ ಅಪರಾಧಿಗಳಿಗೆ 3 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ತಲಾ 6,000 ರೂ. ದಂಡ ವಿಧಿಸಿದೆ. ನ್ಯಾಯಾಧೀಶ ರಾಮಲಿಂಗೇ ಗೌಡ 19 ಸಾಕ್ಷಿಗಳ ಪೈಕಿ 10 ಮಂದಿ ಸಾಕ್ಷಿಗಳ ವಿಚಾರಣೆಯನ್ನು ನಡೆಸಿ ಆರೋಪ ಸಾಬೀತಾಗಿದೆ ಎಂದು ತಿಳಿಸಿ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಹರಿಶ್ಚಂದ್ರ ಉದ್ಯಾವರ್ ವಾದ ಮಂಡಿಸಿದ್ದರು.