ಮಂಗಳೂರು: ಹೊಂಡ ಬಿದ್ದ ರಸ್ತೆ ದುರಸ್ತಿಪಡಿಸಲು ಆಗ್ರಹಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದರೆ, ಮಾಜಿ ಸಚಿವ ಯು.ಟಿ ಖಾದರ್ ಆಪ್ತನೊಬ್ಬ ಸ್ಥಳೀಯ ನಗರಸಭಾ ಸದಸ್ಯನ ಜೊತೆ ಹೊಡೆದಾಡಿ ಬೀದಿ ರಂಪ ಮಾಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಸ್ಥಳೀಯ ಶಾಸಕ ಯುಟಿ ಖಾದರ್ ಆಪ್ತ, ಉಳ್ಳಾಲ ನಗರಸಭೆಯ ಮಾಜಿ ಸದಸ್ಯನೂ ಆಗಿರುವ ಉಸ್ಮಾನ್ ಕಲ್ಲಾಪು ಬೆಂಬಲಿಗರು, ಹಾಲಿ ಕೌನ್ಸಿಲರ್ ಮುಶ್ತಾಕ್ ಪಟ್ಲ ಮತ್ತು ಅಸ್ಗರ್ ಕಲ್ಲಾಪು ಎಂಬವರ ಮೇಲೆ ಹಲ್ಲೆ ನಡೆಸಿದ್ದಾರೆ.
ಆಗಿದ್ದೇನು..?
ಮಂಗಳೂರಿನ ಉಳ್ಳಾಲದ ಕಲ್ಲಾಪು ಎಂಬಲ್ಲಿ ಪಟ್ಲಕ್ಕೆ ಹೋಗುವ ರಸ್ತೆ ಮರಳು ಲಾರಿಗಳ ಸಾಗಾಟದಿಂದಾಗಿ ಹೊಂಡ ಬಿದ್ದು ಕೆಸರುಮಯ ಆಗಿತ್ತು. ಇದನ್ನು ಸರಿಪಡಿಸಲು ಒತ್ತಾಯಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ. ಬಳಿಕ ನಗರಸಭಾ ಅಧಿಕಾರಿಗಳು ಮತ್ತು ಸದಸ್ಯರು ಆಗಮಿಸಿದ್ದು ಸಾರ್ವಜನಿಕರು ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಕೊನೆಗೆ ದುರಸ್ತಿ ಕಾರ್ಯ ಆರಂಭಗೊಳ್ಳುವಷ್ಟರಲ್ಲಿ ಮಾತಿಗೆ ಮಾತು ಬೆಳೆದು ಎರಡು ಗುಂಪು ಹೊಡೆದಾಡಿಕೊಂಡಿದೆ. ಮಾಜಿ ಸದಸ್ಯ ಉಸ್ಮಾನ್ ಕಲ್ಲಾಪು ಮತ್ತು ಹಾಲಿ ಸದಸ್ಯ ಮುಶ್ತಾಕ್ ಕೈ ಮಿಲಾಯಿಸಿಕೊಂಡು ಹೊಡೆದಾಡಿದ್ದು ಸ್ಥಳೀಯರ ಮೊಬೈಲಿನಲ್ಲಿ ಸೆರೆಯಾಗಿದೆ.
ಒಟ್ಟಿನಲ್ಲಿ ರಸ್ತೆ ದುರಸ್ತಿ ಹೆಸರಲ್ಲಿ ಕೌನ್ಸಿಲರ್ ಗಳೇ ಬೀದಿಯಲ್ಲಿ ಹೊಡೆದಾಡಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.