ಮಂಗಳೂರು: ಕೊರೊನಾ ಮಹಾಮಾರಿ ದಿನೇ ದಿನೇ ತನ್ನ ವ್ಯಾಪ್ತಿಯನ್ನು ಜಾಸ್ತಿ ಮಾಡಿಕೊಳ್ಳುತ್ತಿದೆ. ಜೊತೆಗೆ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿವೆ. ಇಂದು ಮಂಗಳೂರಿನಲ್ಲೂ ಕೂಡ ಓರ್ವ ಮಹಿಳೆ ಸೋಂಕಿನಿಂದ ಮೃತಪಟ್ಟದ್ದಾರೆ.
ಮಂಗಳೂರಿನ ಕೊರೊನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳ ಮೂಲದ 50 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಹಿಳೆ ಶನಿವಾರ ಬಂಟ್ವಾಳ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಅವರನ್ನು ಕೊರೊನಾ ರೋಗದ ಲಕ್ಷಣ ಕಂಡುಬಂದ ಹಿನ್ನೆಲೆ ಅಲ್ಲಿಂದ ಮಂಗಳೂರಿನ ಕೋವಿಡ್ ಆಸ್ಪತ್ರೆಗೆ ರವಾನಿಸಲಾಗಿತ್ತು.
Advertisement
Advertisement
ನಂತರ ರೋಗಿಯ ಗಂಟಲು ದ್ರವ ಮತ್ತು ಬ್ಲಡ್ ಅನ್ನು ತೆಗೆದು ಶನಿವಾರವೇ ಪರೀಕ್ಷೆಗೆ ಕಳುಹಿಸಲಾಗಿತ್ತು. ಆದರೆ ವರದಿ ಬರುವ ಮುನ್ನವೇ ಮಹಿಳೆ ಸಾವನ್ನಪ್ಪಿದ್ದು, ಈಗ ಬಂದ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಈ ಮೂಲಕ ಕರ್ನಾಟಕದಲ್ಲಿ ಕೊರೊನಾಗೆ 15 ಮಂದಿ ಮೃತಪಟ್ಟಿದ್ದಾರೆ.
Advertisement
Advertisement
ಈಗ ಮೃತಳ ಪತಿ ಮತ್ತು ಮಗನನ್ನು ಕ್ವಾರಂಟೈನ್ ಮಾಡಲಾಗಿದೆ. ಮೃತಳ ಅತ್ತೆಯ ಸ್ಥಿತಿ ಗಂಭೀರವಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಮೂವರ ಗಂಟಲು ದ್ರವವನ್ನು ಸಂಗ್ರಹಿಸಿ ಪರೀಕ್ಷೆ ಕಳುಹಿಸಲಾಗಿದೆ. ಮೃತ ಮಹಿಳೆ ಮಗ ಮಾರ್ಚ್ 16 ರಂದು ದುಬೈನಿಂದ ಬಂದಿದ್ದು, ಈತನಿಂದಲೇ ಸೋಂಕು ಬಂದಿರಬಹುದಾ ಎಂದು ಶಂಕಿಸಲಾಗುತ್ತಿದೆ,
ಕೊರೊನಾಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಮಹಿಳೆ ಮೃತಪಟ್ಟ ಹಿನ್ನೆಲೆಯಲ್ಲಿ ಬಂಟ್ವಾಳ ಕೆಳಗಿನ ಪೇಟೆ ಸೀಲ್‍ಡೌನ್ ಮಾಡಲಾಗಿದೆ. ಸೀಲ್ ಡೌನ್ ಆಗಿದೆ, ಯಾರು ಮನೆಯಿಂದ ಹೊರಬರಬೇಡಿ ಎಂದು ಪೊಲೀಸರು ಜೀಪ್ ನಲ್ಲಿ ಎಚ್ಚರಿಕೆ ನೀಡುತ್ತಿದ್ದಾರೆ.