ಮಂಗಳೂರು: ಇಂದು ರಾತ್ರಿ 9 ಗಂಟೆಗೆ 9 ನಿಮಿಷ ದೀಪ ಹಚ್ಚಿ ಕೊರೊನಾ ವಿರುದ್ಧ ಹೋರಾಟವನ್ನು ಅರ್ಥಪೂರ್ಣವಾಗಿಸಿ ಎಂದು ಕುಕ್ಕೆ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ಸ್ವಾಮೀಜಿ ಭಕ್ತರಲ್ಲಿ ಮನವಿ ಮಾಡಿದ್ದಾರೆ.
ದೀಪವೆಂಬುದು ರೋಗ ಪರಿಹಾರಕ ದಿವ್ಯ ವಸ್ತು, ಕತ್ತಲಿನಿಂದ ಬೆಳಕಿನೆಡೆಗೆ ಸಾಗಬೇಕೆಂಬ ತತ್ವ ದೀಪದಲ್ಲಿದೆ ಸ್ವಾಮೀಜಿ ತಿಳಿಸಿದರು. ಜಗತ್ತಿನಲ್ಲಿ ಕೊರೊನಾ ಕಾಯಿಲೆಯಿಂದ ಕತ್ತಲು ಆವರಿಸಿದೆ ಕತ್ತಲು ಓಡಿಸಲು ಇದು ಸಾಂಕೇತಿಕ ಆಚರಣೆ. ಅಗ್ನಿಯಿಂದ ಬೆಳಗುವ ಬೆಳಕು ದೇವತೆಗಳಿಗೆ ಪ್ರಿಯ. 9 ಕುಜನ ಸಂಖ್ಯೆ, ಕುಜ ಅಗ್ನಿತತ್ವದ ಅಧಿದೇವತೆ. ಕುಜನ ಪ್ರತಿನಿಧಿ ಅಗ್ನಿಯ ಮೂಲಕ ಕೊರೊನಾ ರಾಹುವನ್ನು ಓಡಿಸಬೇಕು. ಅದಕ್ಕಾಗಿ ಭಕ್ತರು ಇಂದು ದೀಪ ಹೊತ್ತಿಸಬೇಕು ಎಂದು ವಿದ್ಯಾಪ್ರಸನ್ನ ಸ್ವಾಮೀಜಿ ಭಕ್ತರಲ್ಲಿ ಹೇಳಿದರು.
Advertisement
Advertisement
ಏಪ್ರಿಲ್ 3ರಂದು ವಿಡಿಯೋ ಸಂದೇಶ ಕಳುಹಿಸಿದ ಮೋದಿ ಅವರು, ಏಪ್ರಿಲ್ 5ಕ್ಕೆ ಎಲ್ಲರೂ ಒಟ್ಟಾಗೋಣ. ಏಪ್ರಿಲ್ 5ಕ್ಕೆ ಮಹಾ ಶಕ್ತಿಯ ಜಾಗೃತಿ ಆಗಬೇಕಿದೆ. ಹೀಗಾಗಿ ರಾತ್ರಿ 9 ಗಂಟೆಗೆ ದೀಪ, ಮೇಣದ ಬತ್ತಿ, ಟಾರ್ಚ್, ಮೊಬೈಲ್ ಟಾರ್ಚ್ ಬೆಳಗಿಸಬೇಕು. ಆ ಬೆಳಕಿನಲ್ಲಿ ನಮ್ಮ ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಳ್ಳಬೇಕು. ನಾವು ಎಲ್ಲರೂ ಒಗ್ಗಟ್ಟಾಗಿದ್ದೇವೆ ಎನ್ನುವ ಸಂಕಲ್ಪ ಮಾಡಬೇಕು. ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಮೋದಿ ಕರೆಕೊಟ್ಟಿದ್ದರು.